ಗುಂಡು ಹೊಡೆದು ಹತ್ಯೆಗೈದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಚಿಕ್ಕಮಗಳೂರು, ಜು.4: ತಾಲೂಕಿನ ಮತ್ತಿಕೆರೆ ಗ್ರಾಮದ ತೋಟವೊಂದರ ಬಳಿಯ ರಸ್ತೆಯಲ್ಲಿ ಬಂದೂಕಿನಿಂದ ಹೊಡೆದ ಗುಂಡುಗಳಿದ್ದ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದ್ದ ಪ್ರಕರಣವನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಚಿಕ್ಕಮಗಳೂರು ತಾಲೂಕಿನ ತಿರುಗಣ ಗ್ರಾಮದ ಸತೀಶ್ ಬಿನ್ ಶೇಷೆಗೌಡ (28) ಹಾಗೂ ಸಂತೋಷ್ ಬಿನ್ ಲಕ್ಷ್ಮಣಗೌಡ(30) ಎಂದು ತಿಳಿದು ಬಂದಿದ್ದು, ಬಂಧಿತರಿಂದ 2 ಬಂದೂಕು, 4 ಗುಂಡುಗಳು, 1 ಗರಗಸ, 2 ಶ್ರೀಗಂಧದ ತುಂಡುಗಳು, 2 ಬೈಕ್ ಹಾಗೂ 1 ಟಾರ್ಚ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಜೂ.25ರಂದು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮತ್ತಿಕೆರೆ ಗ್ರಾಮದಲ್ಲಿ ವ್ಯಕ್ತಿಯೋರ್ವನ ಮೃತ ದೇಹ ಪತ್ತೆಯಾಗಿತ್ತು. ವ್ಯಕ್ತಿಯ ಮೃತದೇಹದಲ್ಲಿ ಬಂದೂಕಿನಿಂದ ಹೊಡೆದಿದ್ದ ಗುಂಡುಗಳು ಪತ್ತೆಯಾಗಿದ್ದು, ಘಟನೆ ಸಂಬಂಧ ಗ್ರಾಮಾಂತರ ಠಾಣೆಯ ಪೊಲೀಸರು ತನಿಖೆ ಕೈಗೊಂಡಾಗ ಮೃತ ವ್ಯಕ್ತಿ ನಗರದ ಶ್ರೀಲೇಖಾ ಚಿತ್ರಮಂದಿರದ ಸಮೀದಲ್ಲಿ ವಾಸವಿದ್ದ ಶೀಲಾವತಿ ಎಂಬವರ ಪತಿ ಹರೀಶ್ ಎಂದು ಗುರುತು ಪತ್ತೆ ಹಚ್ಚಿದ್ದರು.
ಪ್ರಕರಣ ಸಂಬಂಧ ಮೃತ ವ್ಯಕ್ತಿಯ ಪತ್ನಿಯು, ಜೂ.26ರಂದು ತನ್ನ ಗಂಡನನ್ನು ಬಂದೂಕಿನಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಗ್ರಾಮಾಂತರ ಠಾಣೆಯ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಎಸ್ಪಿ ಹರೀಶ್ ಪಾಂಡೆ ಹಾಗೂ ಎಎಸ್ಪಿ ಶೃತಿ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮುಹಮ್ಮದ್ ಸಲೀಂ ಅಬ್ಬಾಸ್ ಹಾಗೂ ಪಿಎಸ್ಸೈ ಗವಿರಾಜ್ ನೇತೃತ್ವದಲ್ಲಿ ವಿಶೇಷ ತಂಡವನ್ನು ಆರೋಪಿಗಳ ಪತ್ತೆಗೆ ನೇಮಿಸಿದ್ದರು. ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳ ತಂಡ ಒಂದು ವಾರದೊಳಗೆ ಪ್ರಕರಣ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹತ್ಯೆಗೆ ಕಾರಣ: ಜೂ.25ರಂದು ರಾತ್ರಿ ಆರೋಪಿ ಸತೀಶ್ ಎಂಬವರ ಮನೆ ಸಮೀಪದಲ್ಲಿದ್ದ ಶ್ರೀಗಂಧದ ಮರವನ್ನು ಹರೀಶ್ ಹಾಗೂ ಮತ್ತಿಬ್ಬರು ಕಡಿದು ಬೈಕ್‍ನಲ್ಲಿ ಸಾಗಿಸುತ್ತಿದ್ದು, ಇದನ್ನು ಗಮನಿಸಿದ ಸತೀಶ್ ಹಾಗೂ ಸಂತೋಷ್ ಬೈಕ್‍ನ ಚಕ್ರಕ್ಕೆ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಈ ವೇಳೆ ಬಂದೂಕಿನ ಗುಂಡು ಹರೀಶ್‍ಗೆ ತಗುಲಿ ಆತ ಮೃತಪಟ್ಟಿದ್ದಾನೆಂದು ತಿಳಿದು ಬಂದಿದ್ದು, ಇದನ್ನು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆಂದು ಪೊಲೀಸ್ ಇಲಾಖೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಸಲೀಂ ಅಬ್ಬಾಸ್ ಹಾಗೂ ಗವಿರಾಜ್‍ರೊಂದಿಗೆ ಎಎಸ್ಸೈಗಳಾದ ಸುಕುಮಾರ್, ನಾಗರಾಜ್, ಎಚ್‍ಸಿಗಳಾದ ನಂಜಪ್ಪ, ಸುರೇಶ್, ಪ್ರಸನ್ನ, ಕುಮಾರಪ್ಪ, ಪೇದೆಗಳಾದ ಮಧುಸೂದನ, ವಿನಾಯಕ, ರಮೇಶ್, ಮಹೇಂದ್ರ ಮತ್ತು ಚಾಲಕ ಮುಸ್ತಫಾ ಭಾಗವಹಿಸಿದ್ದರೆಂದು ಪೊಲೀಸ್ ಇಲಾಖೆಯ ಪ್ರಕಟನೆ ತಿಳಿಸಿದೆ.







