ರೌಡಿ ಲಗ್ಗೆರೆ ಸೀನ ಕಾಲಿಗೆ ಗುಂಡೇಟು

ಬೆಂಗಳೂರು, ಜು.4: ಗಂಭೀರ ಅಪರಾಧ ಪ್ರಕರಣ ಸಂಬಂಧ ರೌಡಿ ಲಗ್ಗೆರೆ ಸೀನ ಕಾಲಿಗೆ ಪೊಲೀಸರು ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀನಿವಾಸ್ ಯಾನೆ ಲಗ್ಗೆರೆ ಸೀನ(28) ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಗರದ ಮಲ್ಲೇಶ್ವರಂ 8ನೆ ಕ್ರಾಸ್‌ನಲ್ಲಿ ಎಲಕ್ಟ್ರಿಷಿಯನ್ ಗಣೇಶ್ ಎಂಬುವರು ಜೂ.17ರ ರಾತ್ರಿ ನಡೆದು ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದರು. ತದನಂತರ, ಸ್ವಲ್ಪದೂರ ಹೋಗಿ ಅಂಗಡಿ ಬಾಗಿಲು ಹಾಕಿ ನಿಂತಿದ್ದ ಮಾಲಕನ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಈ ಸಂಬಂಧ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಅವರು ಕೊಲೆ ಆರೋಪಿಗಳನ್ನು ಬಂಧಿಸಲು ಮಲ್ಲೇಶ್ವರಂ ಠಾಣೆ ಹಾಗೂ ವೈಯಾಲಿಕಾವಲ್ ಠಾಣೆ ಇನ್‌ಸ್ಪೆಕ್ಟರ್ ಅವರನ್ನೊಳಗೊಂಡ ತಂಡವೊಂದನ್ನು ರಚಿಸಿದ್ದರು.
ಗುರುವಾರ ಮುಂಜಾನೆ ಆರೋಪಿ ಲಗ್ಗೆರೆ ಸೀನ, ಗಂಗೊಂಡನಹಳ್ಳಿ ಮುಖ್ಯರಸ್ತೆಯ ತಿಪ್ಪೇನಹಳ್ಳಿ ಬಳಿ ಇದ್ದಾನೆ ಎಂದು ಖಚಿತ ಮಾಹಿತಿ ಬಂದಿದೆ. ಮಲ್ಲೇಶ್ವರಂ ಠಾಣೆ ಇನ್‌ಸ್ಪೆಕ್ಟರ್ ಪ್ರಸಾದ್ ಮತ್ತು ಮುಖ್ಯಪೇದೆ ಸುನೀಲ್‌ಕುಮಾರ್ ಸೇರಿ ಸಿಬ್ಬಂದಿ ವರ್ಗ ಸ್ಥಳಕ್ಕೆ ತೆರಳಿ ಆರೋಪಿಯನ್ನು ಹಿಡಿಯಲು ಹೋದಾಗ ಮುಖ್ಯ ಪೇದೆ ಸುನೀಲ್ ಕುಮಾರ್ ಮೇಲೆ ಆರೋಪಿ ಹಲ್ಲೆ ಮಾಡಿದಾಗ, ಎಚ್ಚೆತ್ತ ಇನ್‌ಸ್ಪೆಕ್ಟರ್ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಲಗ್ಗೆರೆ ಸೀನ ಬಲಗಾಲಿಗೆ ಬಿದ್ದಿದೆ ಎನ್ನಲಾಗಿದೆ.
ಬಳಿಕ ಲಗ್ಗೆರೆ ಸೀನನನ್ನು ಸುತ್ತುವರೆದ ಪೊಲೀಸರು, ವಶಕ್ಕೆ ತೆಗೆದುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡಿರುವ ಮುಖ್ಯಪೇದೆ ಸುನೀಲ್ ಕುಮಾರ್ ಅವರನ್ನು ಸಹ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆರೋಪಿ ಲಗ್ಗೆರೆ ಸೀನನ ವಿರುದ್ದ 3 ಕೊಲೆ ಪ್ರಕರಣ ಸೇರಿದಂತೆ 10 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.







