ಇ-ಸಿಗರೇಟ್‌ನಂತಹ ಸಾಧನಗಳನ್ನು ಔಷಧಿಗಳನ್ನಾಗಿ ವರ್ಗೀಕರಿಸುವ ಪ್ರಸ್ತಾವ ಅಟಾರ್ನಿ ಜನರಲ್‌ಗೆ ರವಾನೆ

ಹೊಸದಿಲ್ಲಿ,ಜು.4: ಇ-ಸಿಗರೇಟ್‌ಗಳು ಸೇರಿದಂತೆ ವಿದ್ಯುನ್ಮಾನ ನಿಕೋಟಿನ್ ಪೂರೈಕೆ ವ್ಯವಸ್ಥೆ (ಎಂಡ್ಸ್) ಸಾಧನಗಳ ತಯಾರಿಕೆ, ಮಾರಾಟ, ವಿತರಣೆ ಮತ್ತು ಆಮದನ್ನು ನಿಷೇಧಿಸಲು ಅವುಗಳನ್ನು ‘ಔಷಧಿ’ಗಳನ್ನಾಗಿ ವರ್ಗೀಕರಿಸುವ ಕೇಂದ್ರ ಆರೋಗ್ಯ ಸಚಿವಾಲಯದ ಪ್ರಸ್ತಾವವನ್ನು ಅಟಾರ್ನಿ ಜನರಲ್ ಅವರ ಅಭಿಪ್ರಾಯವನ್ನು ಕೋರಿ ಅವರಿಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ಇಲ್ಲಿ ತಿಳಿಸಿದರು.
ಇ-ಸಿಗರೇಟ್‌ಗಳು, ಹೀಟ್-ನಾಟ್-ಬರ್ನ್ ಸಾಧನಗಳು,ವೇಪ್ ಮತ್ತು ನಿಕೋಟಿನ್ ಸ್ವಾದದ ಹುಕ್ಕಾ ಇತ್ಯಾದಿಗಳಂತಹ ಪರ್ಯಾಯ ಧೂಮ್ರಪಾನ ಸಾಧನಗಳನ್ನು ನಿಷೇಧಿಸುವುದು ಮೋದಿ ಸರಕಾರದ ಎರಡನೇ ಅಧಿಕಾರಾವಧಿಯಲ್ಲಿ ಮೊದಲ 100 ದಿನಗಳ ಕಾರ್ಯಸೂಚಿಯಲ್ಲಿ ಆರೋಗ್ಯ ಸಚಿವಾಲಯದ ಆದ್ಯತೆಗಳಲ್ಲೊಂದಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಪ್ರಸ್ತಾವವು ಔಷಧಿ ತಾಂತ್ರಿಕ ಸಲಹಾ ಮಂಡಳಿ(ಡಿಟಿಎಬಿ)ಯ ಅನುಮತಿಯನ್ನು ಪಡೆದುಕೊಂಡಿದ್ದು,ಈಗ ಅಟಾರ್ನಿ ಜನರಲ್ ಅವರ ಅಭಿಪ್ರಾಯಕ್ಕಾಗಿ ಕಾಯುತ್ತಿದೆ ಎಂದರು.
ಎಂಡ್ಸ್ ಸಾಧನಗಳನ್ನು ಔಷಧಿಗಳು ಮತ್ತು ಸೌಂದರ್ಯ ಸಾಧನಗಳ ಕಾಯ್ದೆಯಡಿ ‘ಔಷಧಿಗಳು’ ಎಂದು ವರ್ಗೀಕರಿಸುವುದಕ್ಕೆ ಆರೋಗ್ಯ ಸಚಿವಾಲಯದ ಪ್ರಸ್ತಾವನೆಯು ಸಂಬಂಧಿಸಿದೆ.
ಎಂಡ್ಸ್ ಸಾಧನಗಳ ಒಳಿತು-ಕೆಡುಕುಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಸಾಧನಗಳು ಧೂಮ್ರಪಾನದ ಚಟವನ್ನು ನಿಲ್ಲಿಸಲು ನೆರವಾಗುತ್ತವೆ ಮತ್ತು ಸಾಂಪ್ರದಾಯಿಕ ಸಿಗರೇಟ್ ಗಳಿಗೆ ಕಡಿಮೆ ಹಾನಿಕಾರಕ ಪರ್ಯಾಯಗಳಾಗಿವೆ ಎಂದು ಕೆಲವು ಸಂಸ್ಥೆಗಳು ಪ್ರತಿಪಾದಿಸುತ್ತಿದ್ದರೆ,ಈ ಸಾಧನಗಳು ಸಾಂಪ್ರದಾಯಿಕ ಸಿಗರೇಟ್‌ಗಳಂತೆಯೇ ಬಳಕೆದಾರರ ಆರೋಗ್ಯಕ್ಕೆ ಅಪಾಯಗಳನ್ನು ಒಡ್ಡುತ್ತವೆ ಎಂದು ವಾದಿಸುತ್ತಿರುವ ಸರಕಾರವು ಅವುಗಳನ್ನು ನಿಷೇಧಿಸಲು ಬಯಸಿದೆ.
ಔಷಧಿಗಳು ಮತ್ತು ಸೌಂದರ್ಯ ಸಾಧನಗಳ ಕಾಯ್ದೆಯಡಿ ಧೂಮ್ರಪಾನವನ್ನು ಬಿಡಲು ನೆರವಾಗುವ ಯಾವುದೇ ವಸ್ತುವು ಔಷಧಿಗಳ ವ್ಯಾಖ್ಯೆಯಡಿ ಬರುತ್ತದೆ ಎಂದು ಪ್ರಸ್ತಾವದಲ್ಲಿ ಹೇಳಲಾಗಿದೆ.
ಎಂಡ್ಸ್ ಸಾಧನಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಶಿಫಾರಸು ಮಾಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು, ಇವುಗಳ ಬಳಕೆಯಿಂದ ಧೂಮ್ರಪಾನಿಗಳಲ್ಲದವರೂ ನಿಕೋಟಿನ್ ಚಟಕ್ಕೆ ಅಂಟಿಕೊಳ್ಳುತ್ತಾರೆ. ಇ-ಸಿಗರೇಟ್ ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಮತ್ತು ಹಲವಾರು ಶ್ವಾಸಕೋಶ ರೋಗಗಳನ್ನೂ ತರುತ್ತದೆ ಎಂದು ಹೇಳಿದೆ.







