ಆಗಸ್ಟ್ 5ಕ್ಕೆ ವೆಲ್ಲೋರ್ ಲೋಕಸಭಾ ಉಪಚುನಾವಣೆ

ವೆಲ್ಲೋರ್, ಜು.4: ತಮಿಳುನಾಡಿನ ವೆಲ್ಲೋರ್ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ಆಗಸ್ಟ್ 5ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ. ಹಣ ಹಂಚುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಎಪ್ರಿಲ್‌ನಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ರದ್ದು ಮಾಡಲಾಗಿತ್ತು.
ಜುಲೈ 11ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಿದ್ದು ಜುಲೈ 18ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಜುಲೈ 19ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಸಲಾಗುವುದು ಮತ್ತು ಜುಲೈ 22 ನಾಮಪತ್ರ ಹಿಂಪಡೆಯಲು ಅಂತಿಮ ದಿನಾಂಕವಾಗಿದೆ. ಆಗಸ್ಟ್ 9ರಂದು ಮತ ಎಣಿಕೆ ನಡೆಯಲಿದೆ. ಎಲ್ಲ ಮತದಾನ ಕೇಂದ್ರಗಳಲ್ಲಿ ಇವಿಎಂಗಳನ್ನು ಮತ್ತು ವಿವಿಪ್ಯಾಟ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಈಗಾಗಲೇ ಅಗತ್ಯವಿರುವಷ್ಟು ಇವಿಎಂಗಳು ಮತ್ತು ವಿವಿಪ್ಯಾಟ್‌ಗಳನ್ನು ತರಿಸಲಾಗಿದೆ ಮತ್ತು ಈ ಯಂತ್ರಗಳ ನೆರವಿನಿಂದ ಚುನಾವಣೆಯನ್ನು ಸಸೂತ್ರವಾಗಿ ನಡೆಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ. ಗುರುವಾರದಿಂದಲೇ ವೆಲ್ಲೋರ್‌ನಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ಮಾಡಲಾಗಿದ್ದು ಚುನಾವಣೆ ಕೊನೆಗೊಳ್ಳುವವರೆಗೆ ಮುಂದುವರಿಯಲಿದೆ.





