ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ

ಉಡುಪಿ, ಜು.4: ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾಗಿದ್ದ ಅದ ಮಾರು ಮಠದ ಶ್ರೀವಿಬುದೇಶ ತೀರ್ಥ ಸ್ವಾಮೀಜಿ ಇಂಗ್ಲಿಷ್ ಭಾಷೆಯನ್ನು ತುಂಬಾ ಪ್ರೀತಿಸುತ್ತಿದ್ದರು. ತನ್ನ ಸಂಸ್ಥೆಯ ಮಕ್ಕಳು ಇಂಗ್ಲಿಷ್ ಭಾಷೆಯಲ್ಲೇ ವ್ಯವಹರಿಸಬೇಕೆಂಬ ಆಶಯ ಅವರದ್ದಾಗಿತ್ತು ಎಂದು ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ವೇಣುಗೋಪಾಲ ಮುಳ್ಳೇರಿಯಾ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಶ್ರೀ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಪೂರ್ಣಪ್ರಜ್ಞ ಅಡಿಟೋರಿಯಂನಲ್ಲಿ ಆಯೋಜಿಸಲಾದ ಸಂಸ್ಥಾಪಕರ ದಿನಾ ಚರಣೆಯಲ್ಲಿ ಅವರು ಶ್ರೀವಿಬುದೇಶ ತೀರ್ಥ ಸ್ವಾಮೀಜಿಯ ಸಂಸ್ಮರಣಾ ಭಾಷಣ ಮಾಡಿದರು.
ದೆಹಲಿ, ಮುಂಬೈಯಂತಹ ಮಹಾನಗರಗಳು ಸೇರಿದಂತೆ ದೇಶದಾದ್ಯಂತ ಒಟ್ಟು 28 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸ್ವಾಮೀಜಿ ಶಿಕ್ಷಣಕ್ಕೆ ಬಹಳಷ್ಟು ಮಹತ್ವ ನೀಡಿದ್ದರು. ಇದೆಲ್ಲವೂ ಅವರ ವೈಯಕ್ತಿಕ ಆಸಕ್ತಿಯಿಂದಲೇ ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಸ್ವಾಮೀಜಿ ತನ್ನ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತಿಗೆ ಆದ್ಯತೆ ನೀಡಿದ್ದರು. ಯಾವುದೇ ಪ್ರತಿಭಟನೆ, ಧರಣಿ, ಬಂದ್‌ಗೆ ಅವರು ಅವಕಾಶ ನೀಡಲೇ ಇಲ್ಲ. ವಿಜ್ಞಾನ ಮತ್ತು ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಈ ಬಗ್ಗೆ ವಿದ್ಯಾರ್ಥಿ ಗಳಿಗೆ ಪ್ರೇರಣೆ ನೀಡುತ್ತಿದ್ದರು ಎಂದರು.
ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಡಳಿತ ಸಮಿತಿಯ ಗೌರವ ಕಾರ್ಯ ದರ್ಶಿ ಪ್ರದೀಪ್ ಕುಮಾರ್ ಮಾತನಾಡಿ, ಸ್ವಾಮೀಜಿ ದೈಹಿಕ ಶಿಕ್ಷಣದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು. ಕ್ರಿಕೆಟ್‌ನ್ನು ಅವರು ತುಂಬಾ ವಿರೋಧಿಸುತ್ತಿ ದ್ದರು. ಆ ಕಾರಣಕ್ಕೆ ತಮ್ಮ ಯಾವುದೇ ಸಂಸ್ಥೆಗಳಲ್ಲಿ ಕ್ರಿಕೆಟ್‌ಗೆ ಅವರು ಅವಕಾಶ ನೀಡಲೇ ಇಲ್ಲ. ಭಾರತ ವಿಶ್ವಗುರು ಹಾಗೂ ವಿಶ್ವ ಮಾನ್ಯತೆ ಪಡೆಯ ಬೇಕೆಂಬುದು ಸ್ವಾಮೀಜಿಯ ಕನಸಾಗಿತ್ತು ಎಂದು ಹೇಳಿದರು.
ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಸಮಿತಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್, ಪಿಪಿಸಿ ಪ್ರಾಂಶುಪಾಲ ಡಾ.ರಾಘವೇಂದ್ರ ಎ., ಮ್ಯಾನೇಜ್‌ಮೆಂಟ್ ಪ್ರಾಂಶುಪಾಲ ಡಾ.ಭರತ್, ಸಂಧ್ಯಾ ಕಾಲೇಜಿನ ಪ್ರಾಂಶು ಪಾಲೆ ಸುಕನ್ಯಾ ಮೇರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಉಪಸ್ಥಿತರಿದ್ದರು.
ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಚಂದ್ರಕಾಂತ್ ಭಟ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ.ಪ್ರಕಾಶ್ ರಾವ್ ವಂದಿಸಿದರು. ಉಪನ್ಯಾಸಕ ಡಾ.ಆನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.








