ದಲಿತ ಮೀಸಲಾತಿ ಬಗ್ಗೆ ಪ್ರಶ್ನಿಸಿದ್ದ ಪ್ರಾಧ್ಯಾಪಕನ ವಿರುದ್ಧ ದಲಿತ ಸಂಘಟನೆಗಳಿಂದ ದೂರು

ಮೈಸೂರು,ಜು.4: ದಲಿತರ ಮೀಸಲಾತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದ ನಂಜನಗೂಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ಮಂಜುನಾಥ್ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ಜನಸಂಗ್ರಾಮ ಪರಿಷತ್ ಮತ್ತು ದಲಿತ ಸಂಘಟನೆಗಳು ಜಂಟಿಯಾಗಿ ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿವೆ.
ನಂಜನಗೂಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ಮಂಜುನಾಥ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ತಂದೆ ಐಎಎಸ್ ಅಧಿಕಾರಿ (ಎಸ್ಸಿ ಮೀಸಲಾತಿ), ತಾಯಿ ಸರ್ಕಾರಿ ಶಾಲೆಯ ಪ್ರಿನ್ಸಿಪಲ್ (ಎಸ್ಸಿ ಮೀಸಲಾತಿ), ಮಗಳು ಬ್ಯಾಂಕ್ ಕೆಲಸಕ್ಕೆ ಎಸ್ಸಿ ಮೀಸಲಾತಿ ಎಂದು ಅರ್ಜಿ ಸಲ್ಲಿಕೆ, ಮಗ ಎಂಬಿಬಿಎಸ್ ಸೀಟಿಗಾಗಿ ಎಸ್ಸಿ ಎಂದು ಅರ್ಜಿ ಸಲ್ಲಿಕೆ. ಅರ್ಥವಿಲ್ಲದ ಈ ಮೀಸಲಾತಿಯನ್ನು ನಿಲ್ಲಿಸಬೇಕು! ಇದರಿಂದ ನೊಂದವರು ಹಲವಾರು ಜನರಿದ್ದಾರೆ. ಮೀಸಲಾತಿ ನಿಷೇಧಿಸಿ...ಬೆಂಬಲವಿದ್ದರೆ ಶೇರ್ ಮಾಡಿ ಎಂಬ ಪೋಸ್ಟ್ ಅನ್ನು ಹಾಕಿದ್ದರು.
ಈ ವಿಚಾರ ಎಲ್ಲೆಡೆ ಹರಿದಾಡಿದ್ದು, ದಲಿತ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಹಾಗಾಗಿ ಮಂಜನಾಥ್ ಅವರ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ನಂಜನಗೂಡು ತಹಶೀಲ್ದಾರ್ ಅವರಿಗೆ ಜನಸಂಗ್ರಾಮ ಪರಿಷತ್ ವಿಭಾಗೀಯ ಸಂಚಾಲಕ ನಗರ್ಲೆ ವಿಜಯ್ ಕುಮಾರ್, ಮತ್ತು ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ಶಂಕರಪುರ ಸುರೇಶ್ ಲಿಖಿತ ದೂರು ಸಲ್ಲಿಸಿದ್ದಾರೆ. ಜೊತೆಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಸಮಾಜ ಕಲ್ಯಾಣಾಧಿಕಾರಿಗಳಿಗೂ ದೂರು ಸಲ್ಲಿಸಿದ್ದಾರೆ.
ಈ ಕುರಿತು ಮಾತನಾಡಿದ ನಗರ್ಲೆ ವಿಜಯ್‍ಕುಮಾರ್, ಓರ್ವ ಸರಕಾರಿ ನೌಕರ ಸೇವಾವಧಿಯಲ್ಲಿ ಇರುವಾಗಲೇ ಜಾತಿ ಕುರಿತು ಮಾತನಾಡಬಾರದು. ಇದು ಅಪರಾಧವಾಗಿದ್ದು, ಈತನನ್ನು ಸೇವೆಯಿಂದ ವಜಾಗೊಳಿಸಿ, ದಲಿತ ದೌರ್ಜನ್ಯ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು.







