ಅಖಿಲ ಭಾರತ ಸಬ್‌ಜೂನಿಯರ್ ಬ್ಯಾಡ್ಮಿಂಟನ್ : ಅಗ್ರಸೀಡ್ ಆಟಗಾರರಿಬ್ಬರಿಗೆ ಸುಲಭದ ಜಯ
ಉಡುಪಿ, ಜು.4: ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಆಶ್ರಯದಲ್ಲಿ ಉಡುಪಿ ಮತ್ತು ಮಣಿಪಾಲಗಳಲ್ಲಿ ನಡೆದಿರುವ 13 ವರ್ಷದೊಳ ಗಿನವರ ಅಖಿಲ ಭಾರತ ಸಬ್‌ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಬಾಲಕ ಮತ್ತು ಬಾಲಕಿಯರ ವಿಭಾಗ ಗಳೆರಡರಲ್ಲೂ ಅಗ್ರಸೀಡ್ ಆಟಗಾರರು ಸುಲಭದ ಜಯದೊಂದಿಗೆ ಮುನ್ನಡೆ ಸಾಧಿಸಿದ್ದಾರೆ.
ಬಾಲಕರ ವಿಭಾಗದ ಅಗ್ರಸೀಡ್ ಉತ್ತರಖಂಡದ ಅಂಶ್ ನೇಗಿ ಅವರು ಹರ್ಯಾಣದ ಮೊಹಿತ್ ದುಹಾನ್‌ರನ್ನು 21-12, 21-7ರ ನೇರ ಆಟಗಳಿಂದ ಹಿಮ್ಮೆಟ್ಟಿಸಿದರೆ, ಬಾಲಕಿಯರ ವಿಭಾಗದ ಅಗ್ರಸೀಡ್ ಆಂಧ್ರಪ್ರದೇಶದ ನವ್ಯ ಖಂಡೇರಿ ಅವರು ಮದ್ಯಪ್ರದೇಶದ ಅನೂಷ್ಕ ಶಹಾಪೂರ್ಕರ್‌ರನ್ನು 21-3, 21-7ರ ಅಂತರದಿಂದ ಏಕಪಕ್ಷೀಯವಾಗಿ ಸೋಲಿಸಿದರು.
ಬಾಲಕಿಯರ ವಿಭಾಗದಲ್ಲಿ ಎರಡೇ ಸೀಡ್ ಹರ್ಯಾಣದ ಉನ್ನತಿ ಹೂಡಾ ಅವರು ಆಂದ್ರದ ದೀಪಿಕಾ ದೇವನಬೊಯಿನಾರನ್ನು 21-8, 21-7ರಿಂದ, ನಾಲ್ಕನೇ ಸೀಡ್ ಉತ್ತರಪ್ರದೇಶದ ಅನುಷ್ಕಾ ಜುಯೆಲ್, ತಮಿಳುನಾಡಿನ ಮೋನಿಕಾ ಎಂ.ರನ್ನು 21-15,21-16, ಐದನೇ ಸೀಡ್ ಗುಜರಾತ್‌ನ ಆಯಿಷಾ ಗಾಂಧಿ ಅವರು ತಮಿಳುನಾಡಿನ ಆದರ್ಶಿನಿ ಶ್ರೀ ಅವರನ್ನು 21-13, 21-9ರಿಂದ, ಆರನೇ ಸೀಡ್ ಉತ್ತರ ಪ್ರದೇಶದ ಮನ್ಸಾ ರಾವತ್ ಅವರು ತಮಿಳುನಾಡಿನ ಸುಪ್ರಿಯಾ ವೈ ಅವರನ್ನು 21-15, 21-11ರಿಂದ ಹಿಮ್ಮೆಟ್ಟಿಸಿದರು.
ಟೂರ್ನಿಯ ಮೊದಲೆರಡು ದಿನ ಅರ್ಹತಾ ಸುತ್ತಿನ ಪಂದ್ಯಗಳು ನಡೆದಿದ್ದು, ಇಂದಿನಿಂದ ಪ್ರಧಾನ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ಇಂದಿನ ಪಂದ್ಯಗಳಲ್ಲಿ ಆತಿಥೇಯ ಕರ್ನಾಟಕದ ಅನುಷ್ಕಾ ಬಾರೈ, ವೌನಿತಾ ಎ.ಎಸ್., ರುಜುಲಾ ರಾಮು ಜಯಗಳಿಸಿದ್ದು, ಮುಂದಿನ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದಿದ್ದಾರೆ.
ಬಾಲಕರ ವಿಭಾಗದಲ್ಲಿ ಕರ್ನಾಟಕದ ಅವಿ ಬಾಸಕ್, ಓಂ ಮಕಾ ಜಯವನ್ನು ದಾಖಲಿಸಿದ್ದಾರೆ. ಅವಿ ಬಾಸಕ್ ಅವರು ಉತ್ತರ ಪ್ರದೇಶದ ಕೌಸ್ತುಭ ತ್ಯಾಗಿ ಅವರನ್ನು ಮೂರು ಗೇಮ್‌ಗಳ ನಿಕಟ ಹೋರಾಟದಲ್ಲಿ 21-19, 15-21, 21-19ರಿಂದ ರೋಚಕವಾಗಿ ಹಿಮ್ಮೆಟ್ಟಿಸಿದರು. ಅದೇ ರೀತಿ ಓಂ ಮಕಾ ಅವರು ಕರ್ನಾಟಕದವರೇ ಆದ ಪ್ರಶಾಂತ ಕೋಟ್ಯಾನ್‌ರನ್ನು ಮೂರು ನಿಕಟ ಗೇಮ್‌ನಲ್ಲಿ 11-21,21-12,21-17ರಿಂದ ಸೋಲಿಸಿದರು.
ಉಳಿದಂತೆ ಏಳನೇ ಸೀಡ್ ಆಂಧ್ರಪ್ರದೇಶದ ಭಾರ್ಗವ ರಾಮ್ ಅವರು ಉತ್ತರಖಂಡದ ಪ್ರಭಾಸ್ ಕುಮಾರ್ ಕೇಶ್ವಾರನ್ನು ಹಿಮ್ಮೆಟ್ಟಿಸಿದರು. 16ನೇ ಸೀಡ್ ಮದ್ಯಪ್ರದೇಶದ ಆದಿತ್ಯ ಜೋಶಿ ಅವರು ಮಹಾರಾಷ್ಟ್ರದ ಸೋಹಂ ಗೋಖಲೆ ಅವರನ್ನು 21-9,21-16ರ ನೇರ ಆಟದಲ್ಲಿ ಮಣಿಸಿದರು.







