ಬಿಬಿಎಂಪಿಗೆ 3500 ಕೋಟಿ ತೆರಿಗೆ ಸಂಗ್ರಹ ಗುರಿ

ಬೆಂಗಳೂರು, ಜು.4: ಬಿಬಿಎಂಪಿಯು 2019-20 ನೆ ಸಾಲಿನಲ್ಲಿ ಸುಮಾರು 3,500 ಕೋಟಿ ರೂ.ಗಳಷ್ಟು ತೆರಿಗೆ ಸಂಗ್ರಹ ಮಾಡುವ ಗುರಿಯನ್ನಿಟ್ಟುಕೊಳ್ಳಲಾಗಿದೆ.
ಪ್ರಸಕ್ತ ಆರ್ಥಿಕ ವರ್ಷದ ತ್ರೈಮಾಸಿಕ ವರ್ಷದಲ್ಲಿ ಪಾಲಿಕೆಯು 1,757 ಕೋಟಿ ರೂ.ಗಳಷ್ಟು ತೆರಿಗೆ ಸಂಗ್ರಹ ಮಾಡಿದ್ದು, ಆಸ್ತಿ ತೆರಿಗೆ ಸಂಗ್ರಹ ಮಾಡುವ ಸಲುವಾಗಿ ಬಿಬಿಎಂಪಿಯು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಕ್ಕಾಗಿ ಪ್ರತಿ ಬುಧವಾರ ಕಂದಾಯ ಆಂದೋಲನ ದಿನ ಅಭಿಯಾನ ಆರಂಭಿಸಲಾಗಿದೆ. ತೆರಿಗೆ ಹಣ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಶೋಕಾಸ್ ನೋಟಿಸ್ ನೀಡಲಾಗುತ್ತಿದೆ. ಜತೆಗೆ ಕಂದಾಯ ಇಲಾಖೆಯಿಂದ ವಲಯವಾರು ಸಭೆಗಳನ್ನು ನಡೆಸಲಾಗುತ್ತಿದೆ.
ಆನ್‌ಲೈನ್ ತೆರಿಗೆ ಪಾವತಿಗೆ ಒಲವು: ಸಾರ್ವಜನಿಕರು ತೆರಿಗೆಯನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಈ ವರ್ಷದ ಮೊದಲ ತ್ತೈಮಾಸಿಕದಲ್ಲಿ ಆನ್‌ಲೈನ್‌ನ ಮೂಲಕ 642 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಈ ಹಿಂದೆ 2018ರಲ್ಲಿ 459 ಕೋಟಿ ರೂ., 2017ರಲ್ಲಿ 384 ಕೋಟಿ. ರೂ ಮತ್ತು 2016ರಲ್ಲಿ 235 ಕೋಟಿ. ರೂ. ತೆರಿಗೆ ಹಣ (ಮೊದಲ ತ್ತೈಮಾಸಿಕ) ಸಂಗ್ರಹವಾಗಿದೆ. ವರ್ಷದಿಂದ ವರ್ಷಕ್ಕೆ ಆನ್‌ಲೈನ್ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಾಗುತ್ತಿದೆ.







