ಕೆಎಸ್ಆರ್ಟಿಸಿ ಡೀಸೆಲ್ ಟ್ಯಾಂಕರ್‌ಗಳಿಗೆ ಡಿಜಿಟಲ್ ಲಾಕಿಂಗ್ ಸಿಸ್ಟಂ ಅಳವಡಿಕೆ

ಬೆಂಗಳೂರು, ಜು.4: ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕೆಎಸ್ಸಾರ್ಟಿಸಿಯಲ್ಲಿ ಬಿಪಿಸಿಎಲ್‌ರವರಿಂದ ಡೀಸೆಲ್ ಟ್ಯಾಂಕರ್‌ಗಳಿಗೆ ಡಿಜಿಟಲ್ ಲಾಕಿಂಗ್ ಸಿಸ್ಟಂ ಅಳವಡಿಕೆ ಮಾಡಲಾಗುತ್ತಿದೆ.
ಕೆಎಸ್ಸಾರ್ಟಿಸಿ ಕೇಂದ್ರಿಯ ತರಬೇತಿ ಕೇಂದ್ರದಲ್ಲಿ ಕೆಎಸ್ಸಾರ್ಟಿಸಿ ನಿಗಮಕ್ಕೆ ಹಾಗೂ ಸೋದರ ಸಂಸ್ಥೆಗಳಿಗೆ ಡೀಸಲ್ ಪೂರೈಕೆ ಟ್ಯಾಂಕರ್‌ಗಳನ್ನು ಟ್ಯಾಂಪರ್ ಮಾಡಲಾಗದಂತೆ ಡಿಜಿಟಲ್ ಲಾಕಿಂಗ್ ಸಿಸ್ಟಂಅನ್ನು ಅಳವಡಿಸುವ ಕುರಿತಂತೆ ಕಾರ್ಯಾಗಾರವನ್ನು ಕೆಎಸ್ಸಾರ್ಟಿಸಿ ಅಧ್ಯಕ್ಷ ಹಾಗೂ ಶಾಸಕ ಬಿ.ಸತ್ಯನಾರಾಯಣ ಉದ್ಘಾಟಿಸಿದರು.
ಈ ವೇಳೆ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಕೆಎಸ್ಸಾರ್ಟಿಸಿ ಮೊದಲಿನಿಂದಲೂ ಹಲವು ಪ್ರಥಮಗಳಿಗೆ ಮುನ್ನುಡಿ ಬರೆದಿದ್ದು, ಡೀಸಲ್ ಸರಬರಾಜು, ಸಾಗಾಣಿಕೆ, ದಾಸ್ತಾನು/ಸಂಗ್ರಹ ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷ ಹಾಗೂ ವ್ಯತ್ಯಯಗಳು ಉಂಟಾಗದಂತೆ ಕ್ರಮ ವಹಿಸುವುದಕ್ಕಾಗಿ ಡೀಸೆಲ್ ಟ್ಯಾಂಕರ್‌ಗಳಿಗೆ ಡಿಜಿಟಲ್ ಲಾಕಿಂಗ್ ಸಿಸ್ಟಂ ಅಳವಡಿಸಲಾಗಿದೆ ಎಂದರು.
ಈ ವೇಳೆ ಬಿಪಿಸಿಎಲ್ ಪ್ರಾಂತ್ಯ ವ್ಯವಸ್ಥಾಪಕ ಮೇಜರ್ ಶಂಕರ್ ಕರಜಗಿ ಕೆಎಸ್ಸಾರ್ಟಿಸಿ ಅಧ್ಯಕ್ಷ ಬಿ.ಸತ್ಯನಾರಾಯಣ ಡಿಜಿಟಲ್ ಲಾಕ್‌ಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಕೆಎಸ್ಸಾರ್ಟಿಸಿಯ ಮುಖ್ಯ ಅಭಿಯಂತರ ಡಾ.ಕೆ.ರಾಮಮೂರ್ತಿ, ಶಿವಾನಂದ್ ಕವಳಿಕಾಯಿ ಮತ್ತಿತರರಿದ್ದರು.
ಡಿಜಿಟಲ್ ಲಾಕಿಂಗ್ ಸಿಸ್ಟಂ: ತಂತ್ರಜ್ಞಾನ ಆಧಾರಿತ ಲಾಕಿಂಗ್ ವ್ಯವಸ್ಥೆ ಇದಾಗಿದ್ದು, ಬಿಪಿಸಿಎಲ್‌ನಲ್ಲಿ ಇಂಧನ ತುಂಬಿದ ನಂತರ ಟ್ಯಾಂಕರ್‌ಗಳ ಸಾಗಾಣಿಕೆ ಹಂತದಲ್ಲಿ ನಿಗಮದ ಘಟಕಕ್ಕೆ ತಲುಪುವವರೆಗೆ ಮಾರ್ಗ ಮಧ್ಯದಲ್ಲಿ ಯಾರೂ ಟ್ಯಾಂಕರ್ ಅನ್ನು ತೆರೆಯಲು ಸಾಧ್ಯವಿರುವುದಿಲ್ಲ.







