ತೆಲುಗು ಕವಿ ವರವರ ರಾವ್ ಕರ್ನಾಟಕ ಪೊಲೀಸ್ ಕಸ್ಟಡಿಗೆ

ಬೆಂಗಳೂರು, ಜು.4: 2018ರ ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪುಣೆಯ ಯೆರವಾಡ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ತೆಲುಗು ಕವಿ ಮತ್ತು ಹೋರಾಟಗಾರ ವರವರ ರಾವ್ ಅವರನ್ನು ಬುಧವಾರ ಕರ್ನಾಟಕ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
2005ರಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ನಡೆದಿದ್ದ ನಕ್ಸಲ್ ದಾಳಿಗೆ ಸಂಬಂಧಿಸಿದಂತೆ ರಾವ್ ಅವರನ್ನು ಕರ್ನಾಟಕ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಫೆಬ್ರವರಿ 10, 2005ರಲ್ಲಿ ಪಾವಗಡದಲ್ಲಿ ಶಿಬಿರದಲ್ಲಿದ್ದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಮೇಲೆ ತೀವ್ರವಾದಿಗಳು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮೀಸಲು ಪಡೆಯ ಆರು ಸಿಬ್ಬಂದಿ ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ಇನ್ನೊರ್ವ ತೆಲುಗು ಕವಿ ಗದ್ದರ್ ಅವರನ್ನು ಬಂಧಿಸಲು ಹುಡುಕಾಟ ನಡೆಸುತ್ತಿದೆ. ಪೊಲೀಸರ ಒಂದು ತಂಡವನ್ನು ಸದ್ಯ ಅದಕ್ಕಾಗಿ ನಿಯೋಜಿಸಲಾಗಿದೆ.
ಚಿಕ್ಕಮಗಳೂರಿನಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಅಲಿಯಾಸ್ ಪ್ರೇಮ್ ಎಂಬಾತನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆಗೆ ಪ್ರತಿಕಾರವಾಗಿ ಈ ದಾಳಿ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ವರವರ ರಾವ್ ಹಾಗೂ ಗದ್ದರ್ ಸೇರಿದಂತೆ ಹಲವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿತ್ತು. ರಾವ್ ಮತ್ತು ಗದ್ದರ್‌ನನ್ನು ತಲೆಮರೆಸಿಕೊಂಡವರ ಪಟ್ಟಿಗೆ ಸೇರಿಸಲಾಗಿದ್ದರೆ ಇತರ ಆರೋಪಿಗಳ ವಿಚಾರಣೆ ನಡೆಸಿದ ನಂತರ ಖುಲಾಸೆಗೊಳಿಸಲಾಗಿತ್ತು. ಖುಲಾಸೆಯ ವಿರುದ್ಧ ರಾಜ್ಯ ಸಲ್ಲಿಸಿರುವ ಮೇಲ್ಮನವಿ ಸದ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಬಾಕಿಯುಳಿದಿದೆ.
ದೋಷಾರೋಪದಲ್ಲಿ 11 ಮತ್ತು 12ನೇ ಆರೋಪಿಗಳೆಂದು ಹೆಸರಿಸಲಾಗಿರುವ ರಾವ್ ಮತ್ತು ಗದ್ದರ್ ಅವರನ್ನು ಬಂಧಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು 2019ರ ಜೂನ್ 7ರಂದು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ರಾಜ್ಯ ಪೊಲೀಸ್ ತಿಳಿಸಿದ್ದ ಹಿನ್ನೆಲೆಯಲ್ಲಿ ರಾವ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.







