ಕುವೈತ್: ಸಂತ್ರಸ್ತರ ನೆರವಿಗೆ ಬರಲು ಸಂಸದ ನಳಿನ್ ಕೇಂದ್ರ ಸಚಿವ ಮುರಳೀಧರ್ ರಿಗೆ ಮನವಿ

ಮಂಗಳೂರು, ಜು.4: ಉದ್ಯೋಗಕ್ಕೆಂದು ಕುವೈತ್‌ಗೆ ತೆರಳಿ ಸಂಕಷ್ಟಕ್ಕೀಡಾಗಿರುವ 13 ಭಾರತೀಯ ಸಂತ್ರಸ್ತರಿಗೆ ಟಿಕೆಟ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ.ಮುರಳೀಧರ್ ಭರವಸೆ ನೀಡಿದ್ದಾರೆ.
ದಿಲ್ಲಿಯಲ್ಲಿ ಕೇಂದ್ರದ ರಾಜ್ಯ ಸಚಿವರನ್ನು ಗುರುವಾರ ಭೇಟಿಯಾಗಿ ಮನವಿ ಸಲ್ಲಿಸಿದ ಸಂಸದ ನಳಿನ್‌ಕುಮಾರ್ ಕಟೀಲ್, ಸಂತ್ರಸ್ತರ ನೆರವಿಗೆ ಬರಲು ಒತ್ತಾಯಿಸಿದರು.
ಕುವೈತ್‌ನಲ್ಲಿ ಸಂಕಷ್ಟಕ್ಕೀಡಾದ 73 ಭಾರತೀಯರ ಪೈಕಿ ಸ್ವದೇಶಕ್ಕೆ ಮರಳಲಿಚ್ಚಿಸಿರುವ 13 ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಹಣಕಾಸಿನ ತೊಡಕಿದೆ. ಸಂತ್ರಸ್ತರಿಗೆ ವಿಮಾನ ಟಿಕೆಟ್ ನ ವ್ಯವಸ್ಥೆ ಮಾಡಿಸಿಕೊಡಲು ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ನಳಿನ್ ಸಚಿವರನ್ನು ವಿನಂತಿಸಿದರು.
ಅಲ್ಲದೆ, ಕೆಲ ದಿನಗಳ ಹಿಂದೆ ಮಸ್ಕತ್ ಪೊಲೀಸರಿಂದ ಬಂಧಿತವಾಗಿರುವ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ನಿವಾಸಿ ಪ್ರಕಾಶ್ ಪೂಜಾರಿ ಅವರನ್ನು ಭಾರತಕ್ಕೆ ಕರೆತರುವ ವಿಚಾರವಾಗಿ ಮಧ್ಯಪ್ರವೇಶಿಸಲು ಮಸ್ಕತ್‌ನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆಯೂ ಸಂಸದರು ಸಚಿವರನ್ನು ವಿನಂತಿಸಿದರು.
ಈ ಸಂದರ್ಭ ಮಸ್ಕತ್ ಪೊಲೀಸರಿಂದ ಬಂಧಿತನಾಗಿರುವ ಪ್ರಕಾಶ್ ಪೂಜಾರಿ ವಿಚಾರವಾಗಿ ವಿದೇಶಾಂಗ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಚಿವರು, ಕಾನೂನು ತೊಡಕು ನಿವಾರಣೆಯಾದ ತಕ್ಷಣ ಅವರನ್ನು ಸ್ವದೇಶಕ್ಕೆ ಕರೆತರುವ ಭರವಸೆ ನೀಡಿದರು.







