ಅತ್ಯಾಚಾರದಿಂದ ಎಬಿವಿಪಿ ಮುಖವಾಡ ಕಳಚಿದೆ: ವಸಂತ್ ಆಚಾರಿ
ದಲಿತ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ

ಮಂಗಳೂರು, ಜು.4: ಪುತ್ತೂರು ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದ ಐವರು ಆರೋಪಿಗಳು ಸಂಘಪರಿವಾರದ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಕಾರ್ಯಕರ್ತರಾಗಿದ್ದಾರೆ. ಘಟನೆಯಿಂದ ಎಬಿವಿಪಿ ಸಂಘಟನೆಯ ಮುಖವಾಡ ಕಳಚಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಆರೋಪಿಸಿದ್ದಾರೆ.
ವಿದ್ಯಾರ್ಥಿನಿಯೋರ್ವಳನ್ನು ಐವರು ವಿದ್ಯಾರ್ಥಿಗಳು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಅತ್ಯಂತ ಆಘಾತಕಾರಿ ವಿಷಯವಾಗಿದ್ದು, ಸಿಪಿಎಂ ದ.ಕ. ಜಿಲ್ಲಾ ಸಮಿತಿಯು ಈ ಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ ಅವರು ತಿಳಿಸಿದ್ದಾರೆ.
ಪೈಶಾಚಿಕ ಕೃತ್ಯ ಎಸಗಿರುವ ಆರೋಪಿಗಳು ಯಾವುದೇ ಕಾರಣಕ್ಕೂ ಕಾನೂನು ಚೌಕಟ್ಟಿನಿಂದ ಪಾರಾಗಿ ಹೊರಗೆ ಬಾರದಂತೆ ಪೊಲೀಸ್ ಇಲಾಖೆ ತೀವ್ರ ರೀತಿಯ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಪಂಗಡಕ್ಕೆ ಸೇರಿರುವ ವಿದ್ಯಾರ್ಥಿನಿಯ ಮೇಲೆ ನಡೆದಿರುವ ಹಲ್ಲೆ ಖಂಡಿತವಾಗಿಯೂ ಸಮಾಜವೆಂದಿಗೂ ಕ್ಷಮಿಸದಿರುವ ಕೃತ್ಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಪಿಗಳು ಅಮಲು ಪದಾರ್ಥ ಸೇವನೆ ಮಾಡಿ ನಾಗರಿಕ ಸಮಾಜವು ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ. ಘಟನೆಯಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಒಳಗೊಂಡಿರುವ ಸಾಧ್ಯತೆಯೂ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ತೀವ್ರ ರೀತಿಯ ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿನಿಯರು ಧೈರ್ಯವಾಗಿ ಹೋಗಿ ಬರುವ ಸ್ಥಿತಿ ನಿರ್ಮಾಣ ಆಗಬೇಕಾದರೆ ಇಂತಹ ಕೃತ್ಯಗಳು ನಡೆಯದಂತೆ ಪೊಲೀಸ್ ಇಲಾಖೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.
ದಲಿತ ಬಾಲಕಿಗೆ ಮಾರಣಾಂತಿಕ ಹಿಂಸೆ ನೀಡಿದ ಪ್ರಕರಣ: ಖಂಡನೆ
ಪುತ್ತೂರು ತಾಲೂಕಿನ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿಗೆ ಪೊಲೀಸರು ಮಾರಣಾಂತಿಕ ಹಿಂಸೆಯನ್ನು ನೀಡಿರುವುದನ್ನು ಸಿಪಿಎಂ ದ.ಕ. ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ರಕ್ಷಣೆ ನೀಡಬೇಕಾದ ಪೊಲೀಸ್ ಠಾಣೆಯಲ್ಲಿಯೇ ಈ ರೀತಿಯ ನ್ಯಾಯಬಾಹಿರವಾಗಿ ದೈಹಿಕ ಹಲ್ಲೆ ನಡೆಸಿರುವುದನ್ನು ಪೊಲೀಸ್ ಅಧಿಕಾರಿಗಳು ತನಿಖೆಗೊಳಪಡಿಸಿ ದೌರ್ಜನ್ಯಕ್ಕೊಳಗಾದ ದಲಿತ ಬಾಲಕಿಗೆ ನ್ಯಾಯ ಒದಗಿಸಬೇಕು. ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಒತ್ತಾಯಿಸಿದ್ದಾರೆ.







