ಬಸ್ ಪ್ರಯಾಣದ ವೇಳೆ ಹೃದಯಾಘಾತ: ಕಾರ್ಕಳ ಮಾಜಿ ಶಾಸಕ ಗೋಪಾಲ್ ಭಂಡಾರಿ ನಿಧನ

ಮಂಗಳೂರು, ಜು. 4: ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಗೋಪಾಲ ಭಂಡಾರಿ ಇಂದು ಅಪರಾಹ್ನ 2 ಗಂಟೆಯ ಸುಮಾರಿಗೆ ಬೆಂಗಳೂರಿನಿಂದ ವೋಲ್ವೊ ಬಸ್‌ನಲ್ಲಿ ಮಂಗಳೂರಿನತ್ತ ಹೊರಟಿದ್ದರು. ರಾತ್ರಿ ವೇಳೆ ಬಸ್ ಮಂಗಳೂರು ತಲುಪಿದರೂ ಅವರು ಇಳಿಯದ್ದನ್ನು ಕಂಡು ಬಸ್ ನಿರ್ವಾಹಕ ಎಬ್ಬಿಸಲು ಯತ್ನಿಸಿದ್ದಾರೆ. ಅವರು ಎದ್ದೇಳದ್ದನ್ನು ಕಂಡು ನಿರ್ವಾಹಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅದರಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಕೂಡಲೇ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಭಂಡಾರಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯ್ಲಿಯವರ ಆಪ್ತನಾಗಿ ಗುರುತಿಸಿಲ್ಪಟ್ಟಿದ್ದ ಗೋಪಾಲ ಭಂಡಾರಿ ಎರಡು ಬಾರಿ ಕಾರ್ಕಳ ಶಾಸಕರಾಗಿ ಆಯ್ಕೆಯಾಗಿದ್ದರು.
1999ರಲ್ಲಿ ಬಿಜೆಪಿಯ ಕೆ.ಪಿ.ಶೆಣೈಯವರನ್ನು ಸೋಲಿಸಿ ಮೊದಲ ಬಾರಿ ಶಾಸಕರಾಗಿದ್ದ ಭಂಡಾರಿ 2003ರಲ್ಲಿ ಬಿಜೆಪಿಯ ವಿ.ಸುನೀಲ್ ಕುಮಾರ್ ವಿರುದ್ಧ ಸೋತಿದ್ದರು. 2008ರಲ್ಲಿ ಬಿಜೆಪಿಯ ಸುನೀಲ್ ಕುಮಾರ್ ವಿರುದ್ಧ ಮತ್ತೆ ಗೆದ್ದು ಎರಡನೇ ಬಾರಿ ಶಾಸಕರಾಗಿದ್ದರು. ಆದರೆ ಕಳೆದ ಬಾರಿಯ ಚುನಾವಣೆ (2018)ಯಲ್ಲಿ ಸ್ಪರ್ಧಿಸಿದ್ದ ಅವರು ಸುನೀಲ್ ಕುಮಾರ್ ವಿರುದ್ಧ ಸೋಲುಂಡಿದ್ದರು. ಸಜ್ಜನ, ಸೌಮ್ಯ ಸ್ವಭಾವದ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ ಗೋಪಾಲ ಭಂಡಾರಿ ಜನಾನುರಾಗಿಯಾಗಿದ್ದರು.
ಮೃತದೇಹ ವೆನ್ಲಾಕ್ ಆಸ್ಪತ್ರೆಯಲ್ಲಿದ್ದು, ಕಾಂಗ್ರೆಸ್ ಮುಖಂಡರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.







