ಸಬ್‌ಮರೀನ್ ದುರಂತದ ಮಾಹಿತಿ ‘ಸರಕಾರಿ ರಹಸ್ಯ’ ಎಂದ ರಶ್ಯ
ಮಾಸ್ಕೋ, ಜು. 4: ರಶ್ಯದ ಪರಮಾಣು ಸಜ್ಜಿತ ಮಿನಿ-ಸಬ್‌ಮರೀನ್‌ನಲ್ಲಿ ನಡೆದಿದೆಯೆನ್ನಲಾದ ಬೆಂಕಿ ಅಪಘಾತದ ಸಂಪೂರ್ಣ ವಿವರಗಳನ್ನು ನೀಡಲು ರಶ್ಯ ಬುಧವಾರ ನಿರಾಕರಿಸಿದೆ. ಈ ದುರಂತದ ವಿವರಗಳು ‘ಸರಕಾರಿ ರಹಸ್ಯ’ವಾಗಿದೆ ಎಂದು ಅದು ಹೇಳಿದೆ.
ಈ ದುರಂತದಲ್ಲಿ ರಶ್ಯದ 14 ಮಂದಿ ನೌಕಾಪಡೆ ಅಧಿಕಾರಿಗಳು ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.
ಆದರೆ, ಬಹುಶಃ ಟೀಕಾಕಾರರ ಒತ್ತಡದಿಂದಾಗಿ, ರಶ್ಯದ ರಕ್ಷಣಾ ಸಚಿವಾಲಯವು ಮೃತಪಟ್ಟವರ ಹೆಸರುಗಳು ಮತ್ತು ಚಿತ್ರಗಳನ್ನು ಪ್ರಕಟಿಸಿದೆ. ಅವರು ತಮ್ಮ ಪ್ರಾಣಗಳನ್ನು ಬಲಿಗೊಟ್ಟು ತಮ್ಮ ಸಹೋದ್ಯೋಗಿಗಳು ಮತ್ತು ಆಳ-ಸಮುದ್ರ ಸಬ್‌ಮರ್ಸಿಬಲ್‌ನ್ನು ಉಳಿಸಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಈ ದುರಂತದಲ್ಲಿ ಹಲವರು ಬದುಕುಳಿದಿದ್ದಾರೆ ಎಂದು ರಕ್ಷಣಾ ಸಚಿವ ಸರ್ಗೀ ಶೊಯಿಗು ಹೇಳಿದ್ದಾರೆ. ಆದರೆ, ಎಷ್ಟು ಮಂದಿ ಬದುಕುಳಿದಿದ್ದಾರೆ ಎನ್ನುವುದನ್ನು ಅವರು ಹೇಳಿಲ್ಲ.
ರಶ್ಯದ ಜಲಪ್ರದೇಶದಲ್ಲಿರುವ ಬ್ಯಾರೆಂಟ್ಸ್ ಸಮುದ್ರದಲ್ಲಿ ಸಬ್‌ಮರ್ಸಿಬಲ್ ಒಂದರಲ್ಲಿ ಸೋಮವಾರ ಬೆಂಕಿ ಸಂಭವಿಸಿದ ಬಳಿಕ, ನಾವಿಕರು ಹೊಗೆಯನ್ನು ಸೇವಿಸಿ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ, ಈ ಅಪಘಾತದ ಕುರಿತ ಮಾಹಿತಿಯನ್ನು ಅದು ಮಂಗಳವಾರವಷ್ಟೇ ಬಹಿರಂಗಗೊಳಿಸಿದೆ.
ಆರ್ಕ್‌ಟಿಕ್ ಸಮುದ್ರದ ಸಂಪತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಸಮುದ್ರದ ತಳದಲ್ಲಿ ರಶ್ಯವು ಸಮೀಕ್ಷೆ ನಡೆಸುತ್ತಿದೆ. ಈ ಯೋಜನೆಯ ಭಾಗವಾಗಿಯೇ ರಶ್ಯದ ಸಬ್‌ಮರೀನ್ ಸಮುದ್ರ ತಳದಲ್ಲಿ ಸಂಶೋಧನೆ ನಡೆಸುತ್ತಿತ್ತು. ಆದರೆ, ಅದು ದುರಂತದಲ್ಲಿ ಕೊನೆಗೊಂಡಿದೆ.