ಹತ್ತರ ಬಾಲಕರಿಂದ ಐದರ ಬಾಲೆ ಮೇಲೆ ಅತ್ಯಾಚಾರ !

ಹೊಸದಿಲ್ಲಿ: ಹತ್ತು ಮತ್ತು ಹನ್ನೊಂದು ವಯಸ್ಸಿನ ಇಬ್ಬರು ಬಾಲಕರು ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ಪ್ರಕರಣ ನೈರುತ್ಯ ದೆಹಲಿಯ ಕಪಶೇರಾ ಪ್ರದೇಶದಿಂದ ವರದಿಯಾಗಿದೆ.
ಕಪಶೇರಾ ಕೊಳಗೇರಿಯಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಬಾಲಕಿ ಕೂಲಿಗಾರರ ಕುಟುಂಬಕ್ಕೆ ಸೇರಿದವಳು.
"ಮಂಗಳವಾರ ಬಾಲಕಿ ಇತರ ಮಕ್ಕಳ ಜತೆ ಆಟವಾಡುತ್ತಿದ್ದಾಗ, ಬಾಲಕರು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಹಲ್ಲೆ ನಡೆಸಿದರು. ಆರೋಪಿ ಬಾಲಕರು ಬಾಲಕಿಗೆ ಪರಿಚಿತರಾಗಿದ್ದು, ಚಾಕಲೇಟ್ ಕೊಡಿಸುವ ಆಸೆ ತೋರಿಸಿ ಆಕೆಯನ್ನು ಕರೆದೊಯ್ದಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.
ಮಗಳನ್ನು ಹುಡುಕುತ್ತಿದ್ದ ಬಾಲಕಿಯ ತಾಯಿ, ಬಾಲಕರು ಅತ್ಯಾಚಾರ ಎಸಗುತ್ತಿರುವುದನ್ನು ನೋಡಿ ಕೂಗಿಕೊಂಡಾಗ ಬಾಲಕರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಲೈಂಗಿಕ ಹಲ್ಲೆ ನಡೆದಿರುವುದು ದೃಢಪಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆರೋಪಿ ಬಾಲಕರ ಪತ್ತೆಗೆ ತಂಡ ರಚಿಸಲಾಗಿತ್ತು. ಆರೋಪಿ ಬಾಲಕರ ತಂದೆ ಹಾಗೂ ಬಾಲಕಿಯ ತಂದೆ ಗುರುಗಾಂವ್ನಲ್ಲಿ ಜತೆಗೆ ಕೂಲಿ ಕೆಲಸ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಬುಧವಾರ ಮಕ್ಕಳನ್ನು ವಶಕ್ಕೆ ಪಡೆದು ಸುಧಾರಣಾಗೃಹಕ್ಕೆ ಕಳುಹಿಸಲಾಗಿದೆ.