ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ

ಚಿಕ್ಕಮಗಳೂರು, ಜು.5: ಪುತ್ತೂರು ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಹಾಗೂ ಮಾದಕ ವಸ್ತುಗಳ ಮಾರಾಟ ಮಾಫಿಯವನ್ನು ಮಟ್ಟಹಾಕುವಂತೆ ಆಗ್ರಹಿಸಿ ನಾಗರಿಕ ಹೊರಾಟ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ನಗರದ ಆಝಾದ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮುಖಂಡ ಸಂತೋಷ್ ಕೋಟ್ಯಾನ್ ಮಾತನಾಡಿ, ಪುತ್ತೂರು ಖಾಸಗಿ ಕಾಲೇಜು ವಿದ್ಯಾರ್ಥಿನಿಯನ್ನು ಸಹಪಾಠಿಗಳು ಡ್ರಾಪ್ ಕೊಡುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ನಡೆಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ. ಜ್ಞಾನಾರ್ಜನೆಗಾಗಿ ಕಾಲೇಜಿಗೆ ಬರುವ ಯುವ ಸಮುದಾಯ ಡ್ರಗ್ಸ್ ಮಾಫಿಯಾಕ್ಕೆ ಬಲಿಯಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಅಡ್ಡದಾರಿ ತುಳಿಯುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಹೇಳಿದರು.
ಚಿಕ್ಕಮಗಳೂರು ಹಾಗೂ ಮಲೆನಾಡು ಭಾಗಗಳಿಂದಲೇ ಗಾಂಜಾ, ಅಫೀಮ್‍ನಂತಹ ಮಾದಕ ವಸ್ತುಗಳು ಸರಬರಾಜಾಗುತ್ತಿರುವ ವಿಚಾರ ಎಲ್ಲೆಡೆ ಕೇಳಿಬರುತ್ತಿದೆ. ಈ ಕುರಿತು ಪೋಲೀಸ್ ಇಲಾಖೆ ಮುಂಜಾಗೃತಾ ಕ್ರಮವಹಿಸುವ ಮೂಲಕ ಮಾದಕ ವಸ್ತು ಮಾಫಿಯಾವನ್ನು ಸಂಪೂರ್ಣವಾಗಿ ಮಟ್ಟಹಾಕಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಎಸ್ಪಿ ಮುಖಂಡ ಕೆ.ಟಿ ರಾಧಾಕೃಷ್ಣ, 3 ತಿಂಗಳ ಹಿಂದೆಯೇ 5 ಮಂದಿ ಸಮಾಜ ವಿದ್ರೋಹಿಗಳು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಘಟನೆಯನ್ನು ಮೊಬೈಲ್ ಮೂಲಕ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟು ಯುವತಿಯನ್ನು ಮಾನಸಿಕವಾಗಿ ಹಿಂಸಿಸಿದ್ದಾರೆ. ತಪ್ಪಿತಸ್ಥರನ್ನು ಈಗಾಗಲೇ ಪೋಲೀಸ್ ಇಲಾಖೆ ಬಂಧಿಸಿದೆ ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಒತ್ತಾಯಿಸಿದರು.
ಜೆಡಿಎಸ್‍ನ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್ ದೇವರಾಜ್ ಮಾತನಾಡಿ, ಅತ್ಯಾಚಾರ ಮಾಡಿದ ಯುವಕರು ಗುರುತಿಸಿಕೊಂಡಿರುವ ಸಂಘಟನೆಗಳಿಂದ ಅವರನ್ನು ಕೂಡಲೇ ಉಚ್ಚಾಟಿಸಬೇಕು. ಅತ್ಯಾಚಾರಕ್ಕೊಳಗಾದ ಸಂತ್ರಸ್ಥ ಬಾಲಕಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು ಎಂದರು.
ದಲಿತ ಮುಖಂಡ ಅನೀಲ್ ಆನಂದ್ ಮಾತನಾಡಿ, ಇಂತಹ ಪ್ರಕರಣಗಳು ನಡೆಯುತ್ತಿರುವುದನ್ನು ಗಮನಿಸಿದರೆ ಸಮಾಜ ತನ್ನ ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವಂತೆ ಗೋಚರಿಸುತ್ತಿದ್ದು, ಇಂತಹ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಸಮಾಜ ತನ್ನ ಮೌಲ್ಯಗಳನ್ನು ಉನ್ನತೀಕರಿಸಿಕೊಳ್ಳುವ ಚಿಂತನೆ ನಡೆಸಬೇಕಿದೆ ಎಂದರು.
ಪತ್ರಕರ್ತ ವಿಶ್ವನಾಥ ಮಾತನಾಡಿ, ಇಂತಹ ಪ್ರಕರಣಗಳು ನಡೆದಾಗ ತಪ್ಪು ಮಾಡಿದವರು ಯಾರೇ ಆಗಿದ್ದರೂ ತಪ್ಪಿತಸ್ಥರನ್ನು ತಪ್ಪಿತಸ್ಥರೆಂದೇ ಪರಿಗಣಿಸಿ, ಮಾನವೀಯ ಮೌಲ್ಯಗಳ ಆಧಾರದಲ್ಲಿ ಖಂಡಿಸುವುದಾದರೆ ಪ್ರಕರಣಗಳು ಮರುಕಳಿಸುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಮುರುಳೀಧರ ಕಿಣಿ, ಮರ್ಲೆ ಅಣ್ಣಯ್ಯ, ರಂಜಿತ್‍ಶೆಟ್ಟಿ, ಸಂತೋಷ್, ಶ್ಯಾಮ್, ಸುಜನ್, ಹಾಂದಿ ಲಕ್ಷ್ಮಣ್ ಸೇರಿದಂತೆ ಹಲವರಿದ್ದರು.
.jpg)







