ಗುತ್ತಿಗೆದಾರರಿಗೆ, ವೃತ್ತಿಪರರಿಗೆ 50 ಲ.ರೂ.ಗೆ ಮೀರಿದ ಪಾವತಿಗಳಿಗೆ ಟಿಡಿಎಸ್ ಕಡ್ಡಾಯ

ಹೊಸದಿಲ್ಲಿ,ಜು.5: ತೆರಿಗೆ ಜಾಲವನ್ನು ವಿಸ್ತರಿಸಲು ಸರಕಾರವು ಗುತ್ತಿಗೆದಾರರು ಮತ್ತು ವೃತ್ತಿಪರರಿಗೆ ವರ್ಷಕ್ಕೆ 50 ಲ.ರೂ.ಗೂ ಹೆಚ್ಚಿನ ಎಲ್ಲ ವ್ಯಕ್ತಿಗತ ಪಾವತಿಗಳಿಗೆ ಶೇ.5ರಷ್ಟು ಮೂಲದಲ್ಲಿಯೇ ತೆರಿಗೆ ಕಡಿತ(ಟಿಡಿಎಸ್)ಗೊಳಿಸಲು ಉದ್ದೇಶಿಸಿದೆ.
ಹಣ ಪಾವತಿಸುವ ವ್ಯಕ್ತಿಯು ಟಿಡಿಎಸ್ ಮೊತ್ತವನ್ನು ಸರಕಾರಿ ಖಜಾನೆಯಲ್ಲಿ ಕಟ್ಟಬಹುದಾಗಿದ್ದು,ಇದಕ್ಕಾಗಿ ಆತ/ಆಕೆ ತನ್ನ ಪಾನ್ ಸಂಖ್ಯೆಯನ್ನು ಮಾತ್ರ ಬಳಸಿದರೆ ಸಾಕು ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ತನ್ನ ಬಜೆಟ್ ಭಾಷಣದಲ್ಲಿ ತಿಳಿಸಿದರು.
ಚಾಲ್ತಿ ಖಾತೆಯಲ್ಲಿ ಒಂದು ಕೋಟಿ ರೂ.ಠೇವಣಿಯಿರಿಸುವ,ವರ್ಷಕ್ಕೆ ವಿದ್ಯುತ್ ಶುಲ್ಕ ಪಾವತಿಗಾಗಿ ಒಂದು ಲ.ರೂಗೂ ಅಧಿಕ ಮತ್ತು ವಿದೇಶ ಪ್ರವಾಸಕ್ಕಾಗಿ ಎರಡು ಲ.ರೂ.ಗಳನ್ನು ವ್ಯಯಿಸುವ ವ್ಯಕ್ತಿಗಳು ಆದಾಯ ತೆರಿಗೆ ರಿಟರ್ನ್ಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದರು.
ಈಗಿರುವಂತೆ ಓರ್ವ ವ್ಯಕ್ತಿ ಅಥವಾ ಹಿಂದು ಅವಿಭಕ್ತ ಕುಟುಂಬ(ಎಚ್ಯುಎಫ್)ವು ತನ್ನ ವೈಯಕ್ತಿಕ ಬಳಕೆಗಾಗಿ ಅಥವಾ ವ್ಯಕ್ತಿ/ಎಚ್ಯುಎಫ್ ತನ್ನ ವ್ಯವಹಾರ ಅಥವಾ ವೃತ್ತಿಗಾಗಿ ಆಡಿಟ್ಗೆ ಒಳಪಟ್ಟಿಲ್ಲವಾದರೆ ಗುತ್ತಿಗೆದಾರ ಅಥವಾ ವೃತ್ತಿಪರರಿಗೆ ಪಾವತಿಸುವ ಹಣದ ಮೇಲೆ ಟಿಡಿಎಸ್ ಮುರಿದುಕೊಳ್ಳುವ ಅಗತ್ಯವಿಲ್ಲ.
ಟಿಡಿಎಸ್ ಉದ್ದೇಶಕ್ಕಾಗಿ ಚರಾಸ್ತಿಯ ಸ್ವಾಧೀನಕ್ಕಾಗಿ ಮಾಡಲಾದ ಹಣ ಪಾವತಿಯಲ್ಲಿ ಆಸ್ತಿ ಖರೀದಿಗೆ ಸಂಬಂಧಿಸಿದ ಕ್ಲಬ್ ಸದಸ್ಯತ್ವ ಶುಲ್ಕ,ಕಾರ್ ಪಾರ್ಕಿಂಗ್ ಫೀ,ವಿದ್ಯುತ್ ಮತ್ತು ನೀರಿನ ಸೌಲಭ್ಯದ ಶುಲ್ಕ,ನಿರ್ವಹಣಾ ಶುಲ್ಕ ಮತ್ತು ಮುಂಗಡ ಶುಲ್ಕದಂತಹ ಇತರ ಸಾಂದರ್ಭಿಕ ಶುಲ್ಕಗಳೂ ಒಳಗೊಂಡಿರುತ್ತವೆ.
2019,ಜು.5ರಂದು ಮತ್ತು ನಂತರ ನಿವಾಸಿಗಳು ಅನಿವಾಸಿಗಳಿಗೆ ಭಾರತದಲ್ಲಿರುವ ಆಸ್ತಿ ಅಥವಾ ಹಣದ ರೂಪದಲ್ಲಿ ನೀಡುವ ಉಡುಗೊರೆಗಳ ಮೇಲೆ ತೆರಿಗೆ ಹೇರಿಕೆಯನ್ನು ಮುಂಗಡಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯನ್ನು ಸರಳೀಕರಿಸುವ ಕ್ರಮವಾಗಿ ಪಾನ್ ಮತ್ತು ಆಧಾರ್ ಪರಸ್ಪರ ಬದಲಾವಣೆಗೆ ಸರಕಾರವು ಅವಕಾಶ ಕಲ್ಪಿಸಿದೆ. ಇದರಿಂದಾಗಿ ಪಾನ್ ಇಲ್ಲದ ವ್ಯಕ್ತಿಯು ತನ್ನ ಆಧಾರ್ನ್ನು ಬಳಸಿ ಆದಾಯ ತೆರಿಗೆ ರಿಟರ್ನ್ನ್ನು ಸಲ್ಲಿಸಬಹುದಾಗಿದೆ.