ರೈತರು, ಗ್ರಾಮೀಣ ಭಾರತದ ವಿರೋಧಿ ಬಜೆಟ್: ಸಿದ್ದರಾಮಯ್ಯ ಟೀಕೆ

ಬೆಂಗಳೂರು, ಜು.5: 2019-20ನೇ ಸಾಲಿನ ಕೇಂದ್ರ ಸರಕಾರದ ಆಯವ್ಯಯ ಪತ್ರ ಸಂಪೂರ್ಣವಾಗಿ ರೈತರು, ಯುವಜನರು ಮತ್ತು ಗ್ರಾಮೀಣ ಭಾರತದ ವಿರೋಧಿ ಬಜೆಟ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಶುಕ್ರವಾರ ತಮ್ಮ ನಿವಾಸ ‘ಕಾವೇರಿ’ಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ಕಾರಣಕ್ಕೆ ಈ ಟೀಕೆಯನ್ನು ಮಾಡುತ್ತಿಲ್ಲ. ಯಾರಾದರೂ ಆಯವ್ಯಯ ಪತ್ರವನ್ನು ಓದಿದರೆ ಮೇಲ್ನೋಟಕ್ಕೆ ಈ ಮೂರು ಕ್ಷೇತ್ರಗಳನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ ಎಂದರು.
ಸರಕಾರದ ಸಾಧನೆಗಳನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೆ ಪ್ರಚಾರ ವೈಭವಕ್ಕೆ ಮರುಳಾಗಿ ಮತ ಚಲಾಯಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಕೇಂದ್ರ ಸರಕಾರದ 2019-20ನೇ ಸಾಲಿನ ಆಯವ್ಯಯ ಪತ್ರ ಜ್ವಲಂತ ಸಾಕ್ಷಿ. ಇದರ ಜತೆಗೆ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಕೂಡಾ ನಿರ್ಲಕ್ಷಿಸಲಾಗಿದೆ ಎಂದು ಅವರು ದೂರಿದರು.
ದೇಶದ ರೈತರು ಸರಿಯಾದ ಮಳೆ ಇಲ್ಲದೆ, ಬೆಳೆದ ಬೆಳೆಗೆ ಯೋಗ್ಯ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ದೇಶದ ಯುವಜನತೆ ನಿರುದ್ಯೋಗದಿಂದಾಗಿ ದಿಕ್ಕೆಟ್ಟು ಕೂತಿದ್ದಾರೆ. ಈ ಹಂತದಲ್ಲಿ ನರೇಂದ್ರ ಮೋದಿ ಸರಕಾರ ತಮ್ಮದು ಹೇಗೆ ರೈತ ಮತ್ತು ಯುವಜನ ವಿರೋಧಿ ಪಕ್ಷ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.
ರೈತರು ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ವಂಚಕ ಉದ್ಯಮಿಗಳನ್ನು ಪೋಷಿಸುತ್ತಾ ರೈತ ಸಮುದಾಯವನ್ನು ನಿರ್ಲಕ್ಷಿಸುತ್ತಾ ಬಂದಿರುವ ಮೋದಿ ಸರಕಾರ, ತನ್ನ ರೈತ ವಿರೋಧಿ ನೀತಿಯನ್ನು ಮುಂದುವರಿಸಿಕೊಂಡು ಹೋಗುವ ಸೂಚನೆಯನ್ನು ಬಜೆಟ್‌ನಲ್ಲಿ ನೀಡಿದೆ ಎಂದು ಅವರು ತಿಳಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ನಾನು ಮುಖ್ಯಮಂತ್ರಿಯಾಗಿದ್ದ ದಿನಗಳಿಂದಲೂ ಒತ್ತಾಯಿಸುತ್ತಾ ಬಂದಿದ್ದೇನೆ. ವಂಚಕ ಉದ್ಯಮಿಗಳಿಗೆ ಬ್ಯಾಂಕುಗಳ ಖಜಾನೆಯನ್ನು ತೆರೆದಿಟ್ಟು, ಅವರನ್ನು ವಿದೇಶಕ್ಕೆ ಹಾರಲು ಬಿಟ್ಟ ಸರಕಾರ, ರೈತರನ್ನು ಮಾತ್ರ ಸತತವಾಗಿ ಕಡೆಗಣಿಸುತ್ತಾ ಬಂದಿದೆ ಎಂದು ಅವರು ಹೇಳಿದರು.
ಕೃಷಿ ಬೆಳವಣಿಗೆಗೆ ಪೂರಕವಾಗಿರುವ ನೀರಾವರಿ, ತೋಟಗಾರಿಕೆ, ಸಹಕಾರ ಕ್ಷೇತ್ರಗಳನ್ನು ನಿರ್ಲಕ್ಷಿಸಲಾಗಿದೆ. ನಿರುದ್ಯೋಗ ತಾಂಡವ ವಾಡುತ್ತಿರುವ ಈ ದಿನಗಳಲ್ಲಿ ಅತ್ಯಂತ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿರುವ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿರುವುದರಿಂದ ನಿರುದ್ಯೋಗದ ಪ್ರಮಾಣ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ವಲಸೆ ಪ್ರಮಾಣ ಹೆಚ್ಚಾಗಲಿದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇವೆ ಎಂದು ಐದು ವರ್ಷಗಳ ಹಿಂದೆ ಆಶ್ವಾಸನೆ ನೀಡಿದ್ದ ಮೋದಿ ಸರಕಾರ, ಈ ಬಜೆಟ್‌ನಲ್ಲಿಯೂ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ. ನೀರಾವರಿ ಕ್ಷೇತ್ರಕ್ಕೆ ಕಳೆದ ನಾಲ್ಕು ವರ್ಷಗಳಲ್ಲಿ 433 ಕೋಟಿ ರೂ.ಗಳಷ್ಟು ಕಡಿಮೆ ಖರ್ಚು ಮಾಡಲಾಗಿದೆ ಎಂದು ಅವರು ದೂರಿದರು. ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಆಕರ್ಷಕ ಯೋಜನೆಯನ್ನು ಪ್ರಕಟಿಸಿರುವ ಸರಕಾರ, ನೀರು ಸಂಗ್ರಹದ ಬಗ್ಗೆ ಮಾತ್ರ ಏನನ್ನೂ ಹೇಳಿಲ್ಲ. ಇಲ್ಲಿಯ ವರೆಗೆ ನಿರುದ್ಯೋಗ ಪ್ರಮಾಣದ ಬಗ್ಗೆ ಕಣ್ಣು ಮುಚ್ಚಾಲೆ ಆಡುತ್ತಾ ಬಂದಿರುವ ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ನಿರುದ್ಯೋಗದ ಪ್ರಮಾಣ ಶೇ.45 ತಲುಪಿದೆ ಎಂದು ಒಪ್ಪಿಕೊಂಡಿದೆ ಎಂದು ಅವರು ಹೇಳಿದರು.
ನೋಟ್ ಬ್ಯಾನ್, ಕೈಗಾರಿಕಾ ಕ್ಷೇತ್ರದ ಹಿನ್ನಡೆ ಮತ್ತು ಅವೈಜ್ಞಾನಿಕ ಜಿಎಸ್‌ಟಿಯಿಂದಾಗಿ ನಿರುದ್ಯೋಗ ಹೆಚ್ಚಾಗಲಿದೆ ಎಂದು ನಮ್ಮ ಪಕ್ಷ ಸಾರಿ ಸಾರಿ ಹೇಳಿದರೂ ಪ್ರಧಾನಿ ಮೋದಿ ಕಿವಿಗೆ ಹಾಕಿಕೊಂಡಿರಲಿಲ್ಲ. ಈಗ ಅನಿವಾರ್ಯವಾಗಿ ಸರಕಾರ ತಪ್ಪೊಪ್ಪಿಗೆ ಮಾಡಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬಹುಪ್ರಚಾರದ ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ ಕಳೆದ ಐದು ವರ್ಷಗಳಲ್ಲಿ ಶೇ.13ರಷ್ಟು ಹಣ ಕಡಿತಗೊಳಿಸಲಾಗಿದೆ. ಕಳೆದೆರಡು ವರ್ಷಗಳಲ್ಲಿ ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗೆ ಸುಮಾರು 2 ಸಾವಿರ ಕೋಟಿ ರೂ.ಅನುದಾನವನ್ನು ಕಡಿತಗೊಳಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ತಮಗಿರುವ ಬಹುಮತದ ಬಲದಿಂದ ತಾವು ನಡೆದದ್ದೇ ದಾರಿ ಎಂಬ ದುರಹಂಕಾರ ಸರಕಾರದ ನಡೆಯಲ್ಲಿ ಕಾಣಬಹುದಾಗಿದೆ. ದೇಶದ ಜನತೆಗೆ ತಮ್ಮ ತಪ್ಪಿನ ತಿಳುವಳಿಕೆಯನ್ನು ಸರಕಾರವೇ ಮಾಡಿಕೊಟ್ಟಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕೇಂದ್ರ ಸರಕಾರದ ಬಜೆಟ್ ಒಂದು ರೀತಿಯಲ್ಲಿ ಕಪ್ಪೆ ಚಿಪ್ಪಿನಂತಿದೆ. ಸೂರ್ಯನೊಳಗೆ ಎಲ್ಲವೂ ಇದೆ. ಆದರೆ ಯಾವುದೂ ಕೈಗೆಟಕುವುದಿಲ್ಲ. ಜಿಡಿಪಿ ದರ ತೀವ್ರ ಕುಸಿದಿದೆ. ಐದು ವರ್ಷದಲ್ಲಿ 5 ತ್ರಿಲಿಯನ್ ಡಾಲರ್ ಬಗ್ಗೆ ಹೇಳಿದ್ದಾರೆ. ಇನ್ನು 2.5 ತ್ರಿಲಿಯನ್ ಡಾಲರ್ ಮೇಲೆ ಏರಿಕೆ ಕಂಡಿಲ್ಲ. ಆರ್ಥಿಕಾವಾಭಿವೃದ್ಧಿ ವಿಚಾರದಲ್ಲಿಯೂ ಕೇಂದ್ರ ಸರಕಾರ ಎಡವಿದೆ.
-ಸಿದ್ದರಾಮಯ್ಯ, ಮಾಜಿ ಸಿಎಂ







