ಗ್ರಾಮೀಣ, ನಗರ ಅಂತರವನ್ನು ಕುಗ್ಗಿಸಲು ಮೂಲಭೂತ ಸೌಕರ್ಯ ಯೋಜನೆಗಳನ್ನು ಘೋಷಿಸಿದ ವಿತ್ತ ಸಚಿವೆ

ಹೊಸದಿಲ್ಲಿ, ಜು.5: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನದಡಿ 80,250 ಕೋಟಿ ರೂ. ವೆಚ್ಚದಲ್ಲಿ 1,25,000 ಕಿ.ಮೀ ಗ್ರಾಮೀಣ ರಸ್ತೆ ನಿರ್ಮಾಣ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಗ್ರಿಡ್ ರಚನೆ ಸೇರಿದಂತೆ ಗ್ರಾಮೀಣ ಮತ್ತು ನಗರಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಅನೇಕ ಕ್ರಮಗಳನ್ನು ಘೋಷಿಸಿದ್ದಾರೆ.
ರಸ್ತೆ, ಜಲಮಾರ್ಗ, ಮೆಟ್ರೊ ಮತ್ತು ರೈಲು ಮುಂತಾದ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯವನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ. ಸ್ವಾವಲಂಬಿ ವೈಮಾನಿಕ ಉದ್ದಿಮೆಯನ್ನು ನಿರ್ಮಿಸುವ ಮೇಲೂ ಆಕೆ ಒತ್ತು ನೀಡಿದ್ದಾರೆ. ಮೂಲಭೂತ ಸೌಕರ್ಯಗಳು, ಡಿಜಿಟಲ್ ಆರ್ಥಿಕತೆ ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮಗಳಲ್ಲಿ ಉದ್ಯೋಗ ಸೃಷ್ಟಿಸುವುದರ ಮೇಲೆ ಹೂಡಿಕೆ ಮಾಡುವ ಅಗತ್ಯವಿದೆ. ಭಾರತ್ ಮಾಲಾ, ಸಾಗರ್ ಮಾಲಾ ಮತ್ತು ಉಡಾನ್ ನಂತಹ ಯೋಜನೆಗಳು ಗ್ರಾಮೀಣ ನಗರ ಅಂತರವನ್ನು ಕಡಿಮೆಗೊಳಿಸಲಿವೆ ಮತ್ತು ನಮ್ಮ ಸಾರಿಗೆ ಮೂಲಸೌಕರ್ಯದಲ್ಲಿ ಸುಧಾರಣೆ ಮಾಡಿದೆ ಎಂದು ಸಚಿವೆ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಗ್ರಿಡ್‌ಗಳ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಕಾರ್ಯಕ್ರಮದ ಸಮಗ್ರ ಪುನರ್‌ರಚನೆ ಮಾಡಲಾಗುತ್ತಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
ಉಪನಗರ ರೈಲ್ವೇಗಳ ಮೇಲೆ ಹೂಡಿಕೆ ಮಾಡಲು ರೈಲ್ವೇ ಇಲಾಖೆಯನ್ನು ಪ್ರೋತ್ಸಾಹಿಸಲಾಗುವುದು ಮತ್ತು ಸಾರ್ವಜನಿಕ ಖಾಸಗಿ ಜೊತೆಗಾರಿಕೆ (ಪಿಪಿಪಿ) ಮೂಲಕ ಮೆಟ್ರೊ ರೈಲು ಜಾಲವನ್ನು ಉತ್ತಮಗೊಳಿಸಲಾಗುವುದು. ಈ ವರ್ಷ ರೈಲು ನಿಲ್ದಾಣಗಳ ಆಧುನೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಸರಕು ಸಾಗಾಟಕ್ಕಾಗಿ ನದಿಗಳನ್ನು ಬಳಸಲು ಸರಕಾರ ಚಿಂತಿಸುತ್ತಿದೆ. ಇದರಿಂದ ರಸ್ತೆಗಳು ಮತ್ತು ರೈಲುಗಳಲ್ಲಿ ಒತ್ತಡ ಕಡಿಮೆಯಾಗುವುದು ಎಂದು ಸಚಿವೆ ತಿಳಿಸಿದ್ದಾರೆ.





