ಐಎಂಎ ವಂಚನೆ ಪ್ರಕರಣ: ಉಪ ವಿಭಾಗಾಧಿಕಾರಿ ಸೇರಿ ಇಬ್ಬರ ಬಂಧನ
1.20 ಕೋಟಿ ರೂ. ಮೌಲ್ಯದ ಔಷಧಿ ಜಪ್ತಿ

ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್
ಬೆಂಗಳೂರು, ಜು.5: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಸೇರಿ ಇಬ್ಬರನ್ನು ಸಿಟ್(ಎಸ್ಐಟಿ) ಬಂಧಿಸಿದೆ.
ಶುಕ್ರವಾರ ನಗರದ ಎಲ್.ಸಿ.ನಾಗರಾಜ್ ಮನೆ ಮೇಲೆ ದಾಳಿ ನಡೆಸಿದ ಸಿಟ್ ತನಿಖಾಧಿಕಾರಿಗಳು, ಶೋಧ ನಡೆಸಿ ದಾಖಲೆ ಪತ್ರಗಳನ್ನು ಜಪ್ತಿ ಮಾಡುವ ಜೊತೆಗೆ ಆರೋಪಿ ಹಾಗೂ ಈತನಿಗೆ ಸಹಾಯ ಮಾಡಿದ ಗ್ರಾಮಲೆಕ್ಕಿಗ ಮಂಜುನಾಥ್ನನ್ನು ಬಂಧಿಸಿದ್ದಾರೆ.
ಐಎಂಎ ವಂಚನೆ ಕೃತ್ಯ ಸಂಬಂಧ ವರದಿ ನೀಡಲು ರಾಜ್ಯ ಸರಕಾರವು ಸಕ್ಷಮ ಪ್ರಾಧಿಕಾರಿಯನ್ನಾಗಿ ನೇಮಿಸಿದ್ದ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರಿಗೆ ಸೂಚಿಸಿತ್ತು. ಆದರೆ, ಆರೋಪಿ, ನೈಜ ಸಂಗತಿಯನ್ನು ಮರೆಮಾಚಿ, ಮನ್ಸೂರ್ ಖಾನ್ಗೆ ಅನುಕೂಲವಾಗುವಂತೆ ವರದಿಯನ್ನು ಸರಕಾರಕ್ಕೆ ಕಳುಹಿಸಿದ್ದ.
ಇದಕ್ಕೆ ಪ್ರತಿಯಾಗಿ ಬರೋಬ್ಬರಿ 4.5 ಕೋಟಿ ರೂ.ಗಳನ್ನು ಲಂಚದ ರೂಪದಲ್ಲಿ ಪಡೆದಿರುವ ಮಾಹಿತಿ ಸಿಟ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ನಾಜರಾಜ್ ಕೃತ್ಯಕ್ಕೆ ಸಹಕರಿಸಿದ ಗ್ರಾಮಲೆಕ್ಕಿಗ ಮಂಜುನಾಥ್ ಎಂಬಾತನನ್ನು ಸಹ ಸಿಟ್ ಬಂಧಿಸಿ, 9 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಸಿಟ್ ಅಧಿಕಾರಿ ಎಸ್.ಗಿರೀಶ್ ತಿಳಿಸಿದ್ದಾರೆ.
1.20 ಕೋಟಿ ಔಷಧಿ ಜಪ್ತಿ
ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಿಟ್ ತನಿಖಾಧಿಕಾರಿಗಳು ದಾಳಿ ಮುಂದುವರೆಸಿದ್ದು, ನಗರದ ಮೂರು ಮಳಿಗೆಗಳಲ್ಲಿ ಶೋಧ ನಡೆಸಿ, 1.20 ಕೋಟಿ ರೂ. ಮೌಲ್ಯದ ಔಷಧಿಗಳನ್ನು ಜಪ್ತಿ ಮಾಡಿದ್ದಾರೆ.
ಐಎಂಎ ಸಮೂಹ ಸಂಸ್ಥೆಗಳ ಒಡೆತನದ ಇಲ್ಲಿನ ಜಯನಗರ, ಬಿಟಿಎಂಲೇಔಟ್ ಹಾಗೂ ಶಾಂತಿನಗರ ವ್ಯಾಪ್ತಿಯಲ್ಲಿದ್ದ ಫ್ರಂಟ್ಲೈನ್ ಫಾರ್ಮಾ ಎಂಬ ಹೆಸರಿನ ಔಷಧಾಲಯಗಳ ಮೇಲೆ ಡಿವೈಎಸ್ಪಿ ಅನಿಲ್ ಭೂಮಿ ರೆಡ್ಡಿ ನೇತೃತ್ವದಲ್ಲಿ ಶುಕ್ರವಾರ ದಾಳಿ ನಡೆಸಲಾಯಿತು.
ಈ ಸಂದರ್ಭದಲ್ಲಿ 1.20 ಕೋಟಿ ರೂ. ಮೌಲ್ಯದ ಔಷಧಿಗಳು, ವಿದ್ಯುನ್ಮಾನ ಉಪಕರಣ ಜಪ್ತಿ ಮಾಡಿ, ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಸಿಟ್ ತನಿಖಾಧಿಕಾರಿಗಳು ತಿಳಿಸಿದ್ದಾರೆ.







