2 ರೂ. ಹೆಚ್ಚಲಿದೆ ಪೆಟ್ರೋಲ್, ಡೀಸೆಲ್ ಬೆಲೆ

ಹೊಸದಿಲ್ಲಿ, ಜು.5: ಕೇಂದ್ರ ಬಜೆಟ್‌ನಲ್ಲಿ ತೆರಿಗೆ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ತೆರಿಗೆ ಹಾಗೂ ರಸ್ತೆ ಮತ್ತು ಮೂಲಭೂತ ಸೆಸ್ (ಉಪಕರ)ವನ್ನು ಪ್ರತೀ ಲೀಟರ್‌ಗೆ 1 ರೂ.ಯಂತೆ ಹೆಚ್ಚಿಸಲು ಸರಕಾರ ನಿರ್ಧರಿಸಿದ್ದು ಇದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಪ್ರತೀ ಲೀಟರ್‌ಗೆ 2 ರೂ. ಹೆಚ್ಚಾಗಲಿದೆ. ಮುಗಿಲು ಮುಟ್ಟಿದ್ದ ಕಚ್ಚಾ ತೈಲದ ದರ ಇಳಿಮುಖವಾಗಿರುವುದರಿಂದ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಮತ್ತು ಸೆಸ್ ಪರಿಷ್ಕರಿಸುವ ಅವಕಾಶ ದೊರಕಿದೆ. ಆದ್ದರಿಂದ ವಿಶೇಷ ಹೆಚ್ಚುವರಿ ಅಬಕಾರಿ ತೆರಿಗೆ ಹಾಗೂ ಸೆಸ್ ಅನ್ನು ಪ್ರತೀ ಲೀಟರ್‌ಗೆ 1 ರೂ. ಹೆಚ್ಚಿಸುವ ಪ್ರಸ್ತಾವನೆಯಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2018-19ರ ಕೇಂದ್ರ ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೂಲ ಅಬಕಾರಿ ತೆರಿಗೆಯನ್ನು ಪ್ರತೀ ಲೀಟರ್‌ಗೆ 2 ರೂ.ಯಂತೆ ಕಡಿತಗೊಳಿಸಲಾಗಿತ್ತು. ಆದರೆ ಇದೇ ವೇಳೆ, ರಸ್ತೆ ಮತ್ತು ಮೂಲಸೌಕರ್ಯ ಸೆಸ್ ರೂಪದಲ್ಲಿ ಪ್ರತೀ ಲೀಟರ್‌ಗೆ 8 ರೂ.ಯಂತೆ ಹೆಚ್ಚಿಸಿದ್ದ ಕಾರಣ ಅಬಕಾರಿ ತೆರಿಗೆ ಕಡಿತದಿಂದ ತೈಲ ಬೆಲೆ ಇಳಿಕೆಯಾಗಿರಲಿಲ್ಲ. ಜಾಗತಿಕ ಕಚ್ಛಾ ತೈಲ ಬೆಲೆಯಲ್ಲಿ ಹೆಚ್ಚಳವಾದಾಗ ತೆರಿಗೆ ಕಡಿಮೆಗೊಳಿಸುವುದು ಸಾಮಾನ್ಯ ಕ್ರಮವಾಗಿದೆ. ಆದರೆ 2014ರ ಬಳಿಕ ಕೇಂದ್ರ ಸರಕಾರ ಹಲವು ಬಾರಿ ಕಚ್ಛಾತೈಲ ಬೆಲೆ ಇಳಿಕೆಯಾದರೂ ತೆರಿಗೆಯನ್ನು ಹೆಚ್ಚಿಸಿದೆ ಎಂದು ಸುದ್ದಿಸಂಸ್ಥೆಯ ವರದಿ ತಿಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಕೇಂದ್ರ ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ರೂಪದಲ್ಲಿ 2.57 ಲಕ್ಷ ಕೋಟಿ ರೂ. ಸಂಗ್ರಹಿಸಿದ್ದರೆ, 2013-14ರಲ್ಲಿ ಈ ಪ್ರಮಾಣ 88,600 ಕೋಟಿ ರೂ. ಆಗಿತ್ತು.







