ವೈದ್ಯರು ಆರೋಗ್ಯ ಕಾಪಾಡುವವರೇ ಹೊರತು ದೇವರಲ್ಲ: ಡಾ.ಗಿರಿಜಾ

ಉಡುಪಿ, ಜು.5: ವೈದ್ಯಕೀಯ ಪ್ರತಿನಿಧಿಗಳ ಸಂಘ ಮತ್ತು ಬ್ರಹ್ಮಾವರ ಜಯಂಟ್ಸ್ ಗ್ರೂಪ್ ವತಿಯಿಂದ 17ನೆ ವರ್ಷದ ವೈದ್ಯರ ದಿನಾಚರಣೆ ಮತ್ತು ಹಿರಿಯ ಸಾಧಕ ವೈದ್ಯರಿಗೆ ಸನ್ಮಾನ ಕಾರ್ಯಕ್ರಮವು ಗುರುವಾರ ಉಡುಪಿ ಕಿದಿಯೂರು ಹೊಟೇಲಿನ ಮಾಧವ ಕೃಷ್ಣ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪಾಲ ಸೋನಿಯಾ ಕ್ಲಿನಿಕ್‌ನ ವೈದ್ಯೆ ಡಾ.ಗಿರಿಜಾ ಮಾತನಾಡಿ, ವೈದ್ಯರನ್ನು ನೋಡುವ ದೃಷಿಕೋನ ಬದಲಾಗಬೇಕು. ಅವರಿಗೂ ಕೂಡ ಖಾಸಗಿ ಜೀವನವಿದೆ. ವೈದ್ಯರು ದೇವರಲ್ಲ ಬದಲಾಗಿ ತಮಲ್ಲಿ ರುವ ಜ್ಞಾನವನ್ನು ಸಮಾಜದ ಆರೋಗ್ಯ ಕಾಪಾಡುವ ಕಾರ್ಯನಿರ್ವಹಿಸು ವವರಾಗಿದ್ದಾರೆ. ಅವರ ಮೇಲೆ ನಡೆಯುವ ಹಲ್ಲೆ ಪ್ರಕರಣಗಳು ಖಂಡನೀಯ ಎಂದರು.
ಹಿರಿಯ ಸಾಧಕ ವೈದ್ಯರಾದ ಡಾ.ಪ್ರತಾಪ್ ಕುಮಾರ್, ಡಾ.ಪಿ.ಗಣಪತಿ ರಾವ್, ಡಾ.ಎಚ್.ರಾಮಮೋಹನ್, ಡಾ.ಕೆ.ರಾಮಚಂದ್ರ ನಂಬಿಯಾರ್ ಅವರನ್ನು ಸನ್ಮಾನಿಸಲಾಯಿತು. ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು. ಅಧ್ಯಕ್ಷತೆಯನ್ನು ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ ವಹಿಸಿದ್ದರು.
ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಅಣ್ಣಯದಾಸ್, ಕಾರ್ಯದರ್ಶಿ ಪ್ರಸನ್ನ ಕಾರಂತ್, ಶ್ರೀನಾಥ್ ಕೋಟ, ಯೂನಿಟ್ ನಿರ್ದೇಶಕ ರಮೇಶ್ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವೈದ್ಯರುಗಳಿಗೆ ಗಿಡ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೀಪಕ್ ಕಟಪಾಡಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಶ್ರೀನಾಥ್ ಕೋಟ ರವರನ್ನು ಗೌರವಿಸಲಾಯಿತು. ಜಯಂಟ್ಸ್ ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂದನ್ ಹೇರೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸನ್ನ ಕಾರಂತ್ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.







