ಎಚ್.ಗೋಪಾಲ ಭಂಡಾರಿಗೆ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಭೆ
ಉಡುಪಿ, ಜು.5: ಗುರುವಾರ ರಾತ್ರಿ ಮಂಗಳೂರಿನಲ್ಲಿ ಅಕಾಲಿಕವಾಗಿ ನಿಧನರಾದ ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹೆಚ್. ಗೋಪಾಲ ಭಂಡಾರಿ ಅವರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ನಾಳೆ ಜು.6ರ ಬೆಳಿಗ್ಗೆ 10:30ಕ್ಕೆ ಶ್ರದ್ದಾಂಜಲಿ ಸಭೆಯನ್ನು ಏರ್ಪಡಿಸಲಾಗಿದೆ.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರುಗಳು ಹಾಗೂ ವಿವಿಧ ಘಟಕಗಳ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂತಾಪ: ಮಾಜಿ ಶಾಸಕ ಗೋಪಾಲ ಭಂಡಾರಿ ಅವರ ಹಠಾತ್ ನಿಧನಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಪ್ರಧಾನ ಕಾರ್ಯದರ್ಶಿ ಬಿ.ನರಸಿಂಹ ಮೂರ್ತಿ, ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು, ನಾಗೇಶ್ ಕುಮಾರ್ ಉದ್ಯಾವರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪಲಿಮಾರುಶ್ರೀ ಸಂತಾಪ: ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಗೋಪಾಲ ಭಂಡಾರಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ, ಹಳ್ಳಿಯಲ್ಲಿ ಹುಟ್ಟಿ ಬೆಳೆದು ಬಡವರ ಕಷ್ಟಗಳನ್ನು ಅರಿತು ಸ್ಪಂಧಿಸಿ, ಸಹಾಯ ಮಾಡುತ್ತಾ, ಸಣ್ಣ ಜವಾಬ್ದಾರಿಯಿಂದ ಹೆಜ್ಜೆಹೆಜ್ಜೆಗೂ ಸಾಧನೆ ಮಾಡಿ ಜನಪ್ರಿಯ ಶಾಸಕರಾಗಿ ಜನಸೇವೆ ಮಾಡಿದ ಸರಳ ಸಜ್ಜನಿಕೆಯ ರಾಜಕಾರಣಿ ಎಂದು ಬಣ್ಣಿಸಿದ್ದಾರೆ.
ಜಿಲ್ಲಾ ಬಿಜೆಪಿ ಸಂತಾಪ: ಸರಳ ಸಜ್ಜಿನಿಕೆಯ ರಾಜಕಾರಣಿ, ಹಿರಿಯ ಕಾಂಗ್ರೆಸ್ ಮುಖಂಡ, ಎರಡು ಬಾರಿಯ ಕಾರ್ಕಳ ಶಾಸಕ ಎಚ್.ಗೋಪಾಲ ಭಂಡಾರಿ ಅವರ ನಿಧನಕ್ಕೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ರಘುಪತಿ ಭಟ್, ಜಾತ್ಯತೀತ ಜನತಾ ದಳದ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರಬಾಬು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್, ನಗರಸಭಾ ಸದಸ್ಯ ಗಿರೀಶ್ ಎಂ. ಅಂಚನ್, ದಿನೇಶ್ ಅಮೀನ್, ದಿನಕರಪೂಜಾರಿ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.







