ಕೇಂದ್ರ ಬಜೆಟ್ ಬಗ್ಗೆ ಗನ್ಯರ ಅಭಿಪ್ರಾಯಗಳು
ಜನಸ್ನೇಹಿ ಬಜೆಟ್
ಇದು ಅತ್ಯಂತ ಜನಪರ ಮತ್ತು ಜನಸ್ನೇಹಿ ಬಜೆಟ್ ಆಗಿದೆ. ಉದ್ಯಮಿಗಳಿಗೆ ಉದ್ಯಮಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಲಾಗಿದೆ. ಆನ್‌ಲೈನ್ ಮೂಲಕ ವ್ಯವಹಾರ ವೃದ್ಧಿಯೊಂದಿಗೆ ಡಿಜಿಟಲ್‌ಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಮೂಲಭೂತ ಸೌಕರ್ಯಗಳಿಗೆ ಸಾಕಷ್ಟು ಒತ್ತು ನೀಡಲಾಗಿದೆ. ಗ್ರಾಮೀಣ ಕೌಶಲ ವೃದ್ಧಿಗೆ ಹೆಚ್ಚು ಕೇಂದ್ರೀಕೃತಗೊಳಿಸಿ ಆ ಭಾಗದ ಜನರು ನಗರಕ್ಕೆ ವಲಸೆ ಬರುವುದನ್ನು ತಪ್ಪಿಸಲಾಗಿದೆ.
ಪಿ.ಬಿ.ಅಬ್ದುಲ್ ಹಮೀದ್
ಅಧ್ಯಕ್ಷರು
ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್
ಮಂಗಳೂರು
ಬಜೆಟ್ ಅನುಷ್ಠಾನಗೊಳ್ಳಲಿ
ಶುಕ್ರವಾರ ಮಂಡಿಸಲ್ಪಟ್ಟ ಕೇಂದ್ರದ ಬಜೆಟ್ ಅನುಷ್ಠಾನಗೊಂಡರೆ ಮಾತ್ರ ಅತ್ಯುತ್ತಮ ಎನ್ನಬಹುದು. ಅಂದರೆ ತೆರಿಗೆ ಪಾವತಿಗೆ ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಇದ್ದರೆ ಸಾಕು. ಪ್ಯಾನ್ ಕಾರ್ಡ್ ಕಡ್ಡಾಯವಲ್ಲ. ಐಟಿ ರಿಟರ್‌ನ್ಸ್ ಸಲ್ಲಿಸಲು ಆಧಾರ್ ಕಾರ್ಡ್ ಸಾಕು. ಇಲೆಕ್ಟ್ರಿಕ್ ವಾಹನ ಖರೀದಿದಾರರಿಗೆ 1.25 ಲಕ್ಷ ರೂ.ವರೆಗೆ ಸಬ್ಸಿಡಿ ನೀಡುವುದು, ಇಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಗಳಿಗೆ ಶೇ.5ರಷ್ಟು ಜಿಎಸ್‌ಟಿ ಇಳಿಕೆ, 5 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿದವರಿಗೆ ತೆರಿಗೆ ಇಲ್ಲ ಇತ್ಯಾದಿಯಾಗಿ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಜಿಎಸ್‌ಟಿಯಲ್ಲಿ ಹೊಸ ವಿಧಾನವನ್ನು ಪರಿಚಯಿಸಲಾಗಿದೆ. ಆದರೆ, ಪೆಟ್ರೋಲ್-ಡೀಸೆಲ್‌ಗೆ ಸೆಸ್ ಆಗಿರುವುದು ಸರಿಯಲ್ಲ. ಒಟ್ಟಿನಲ್ಲಿ ಜನಪರ ಬಜೆಟ್ ಮಂಡಿಸಿದರೂ ಕೂಡ ಅದು ಅನುಷ್ಠಾನಗೊಳ್ಳಬೇಕಿದೆ.
ಗೌರವ ಹೆಗ್ಡೆ
ಅಧ್ಯಕ್ಷರು
ಕೆನರಾ ಸಣ್ಣ ಕೈಗಾರಿಕೆಗಳ ಸಂಘ-ಬೈಕಂಪಾಡಿ
ಉದ್ಯೋಗ ಸೃಷ್ಟಿ ಇಲ್ಲ
ಈ ಬಜೆಟ್‌ನಲ್ಲಿ ಹೊಸತೇನೂ ಇಲ್ಲ. ಕಳೆದ ಬಾರಿಯ ಬಜೆಟ್‌ಗೆ ಒಂದಷ್ಟು ಲೇಪ ಕೊಡಲಾಗಿದೆಯಷ್ಟೆ. ಕಸ್ಟಮ್ ನೀತಿಯಿಂದ ಪ್ಲಾಸ್ಟಿಕ್ ಉದ್ಯಮಕ್ಕೆ ಹೊಡೆತ ಬೀಳಬಹುದು. ಡೀಸೆಲ್-ಪೆಟ್ರೋಲ್‌ಗೆ ಅಧಿಕ ತೆರಿಗೆ ವಿಧಿಸಿರುವುದು ಸರಿಯಲ್ಲ. ನಿರುದ್ಯೋಗ ತಾಂಡವಾಡುವ ಈ ಸಂದರ್ಭ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿತ್ತು. ಆದರೆ, ಈ ಬಜೆಟ್‌ನಲ್ಲಿ ಅದಕ್ಕೆ ಆದ್ಯತೆ ನೀಡಿಲ್ಲ.
ಬಿ.ಎ.ನಝೀರ್
ಅಧ್ಯಕ್ಷರು
ಕೆನರಾ ಪ್ಲಾಸ್ಟಿಕ್ ಉತ್ಪಾದಕರ ಸಂಘ, ಬೈಕಂಪಾಡಿ
ನಿರೀಕ್ಷೆ ಹುಸಿಯಾಗಿದೆ
ಕರಾವಳಿ ಕರ್ನಾಟಕದ ಅಭಿವೃದ್ಧಿಗಾಗಿ ಹೊಸ ಕೊಡುಗೆ ಇರಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು ಹುಸಿಯಾಗಿದೆ. ಬೆಲೆ ಏರಿಕೆಯಿಂದ ಹಣದುಬ್ಬರ ಜಾಸ್ತಿಯಾಗುವ ಅಪಾಯವಿದೆ. ಇದೊಂದು ಮಾಮೂಲಿ ಹಾಗೂ ಶೂನ್ಯ ಮತ್ತು ನಿರಾಶದಾಯಕ ಬಜೆಟ್.
ಹರೀಶ್ ಕುಮಾರ್
ವಿಧಾನ ಪರಿಷತ್ ಸದಸ್ಯರು
ಅಧ್ಯಕ್ಷರು
ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ
ನವ ಭಾರತ ನಿರ್ಮಾಣದ ಆಶಯಕ್ಕೆ ಪೂರಕ
ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತ ನಿರ್ಮಾಣದ ಆಶಯಕ್ಕೆ ಪೂರಕವಾದ ಐತಿಹಾಸಿಕ ಬಜೆಟ್ ಇದಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಸೂಟ್‌ಕೇಸ್ ಬದಿಗಿರಿಸಿ ಭಾರತೀಯತೆಯಂತೆ ಕೆಂಪು ವಸ್ತ್ರದಲ್ಲಿ ಬಜೆಟ್ ಪ್ರತಿಗಳ ಕಟ್ಟನ್ನು ತರುವ ಮೂಲಕ ಪರಂಪರೆಯನ್ನು ಉಳಿಸುವತ್ತ ಹೆಜ್ಜೆಯಿರಿಸುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 30 ಸಾವಿರ ಕಿ.ಮೀ. ರಸ್ತೆ ನಿರ್ಮಾಣ ಪರಿಸರ ಸ್ನೇಹಿ ಯೋಜನೆಯಾಗಿದೆ. ರೈಲ್ವೆ ನಿಲ್ದಾಣಗಳ ಆಧುನೀಕರಣ, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ಪ್ರವಾಸಿ ಕೇಂದ್ರಗಳನ್ನು ವಿಶ್ವದರ್ಜೆಗೆ ಏರಿಸಲು ನಿರ್ಧಾರ, ವಿದ್ಯುತ್ ಕೊರತೆ ನಿವಾರಿಸಲು ಒನ್ ನೇಶನ್ ಒನ್ ಗ್ರಿಡ್ ಮುಂತಾದ ಯೋಜನೆಗಳ ಮೂಲಕ ದೇಶದ ಸರ್ವಾಂಗೀಣ ಪ್ರಗತಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಜಿಎಸ್‌ಟಿಯಲ್ಲಿ ನೋಂದಾಯಿಸಿರುವ ಸಣ್ಣ ಉದ್ದಿಮೆದಾರರಿಗೆ ಶೇ.2ರ ಬಡ್ಡಿ ದರದಲ್ಲಿ ಸಾಲ ಒದಗಿಸಲು 350 ಕೋ.ರೂ.ಮೀಸಲು, ವಾರ್ಷಿಕ ವಹಿವಾಟು 1.5 ಕೋ.ರೂ. ಕಡಿಮೆ ಇರುವ 3 ಕೋಟಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿ ಕರಮ್‌ಯೋಗಿ ಮಾನ್‌ಧನ್ ಯೋಜನೆಯಲ್ಲಿ ಪಿಂಚಣಿ ಸೌಲಭ್ಯ ಘೋಷಿಸುವ ಮೂಲಕ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡಲಾಗಿದೆ. ಮಹಿಳಾ ಸಂಘಗಳಿಗೆ ಬಡ್ಡಿ ವಿನಾಯಿತಿಯಲ್ಲಿ ಸಾಲ, ಮುದ್ರಾ ಯೋಜನೆಯಡಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಘೋಷಿಸುವ ಮೂಲಕ ಮಹಿಳೆಯರ ಹಿತ ರಕ್ಷಣೆಗೆ ಬಜೆಟ್‌ನಲ್ಲಿ ಆದ್ಯತೆ ಕಲ್ಪಿಸಲಾಗಿದೆ.
ವೇದವ್ಯಾಸ ಕಾಮತ್
ಶಾಸಕರು, ಮಂಗಳೂರು ನಗರ ದಕ್ಷಿಣ
ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್
ರೈತರು, ಮೀನುಗಾರರು, ಉದ್ದಿಮೆದಾರರ ಸಹಿತ ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್ ಇದಾಗಿದೆ. ದೇಶದ ಜನತೆಯ ನಿರೀಕ್ಷೆಗೆ ತಕ್ಕಂತೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ನಡೆದಿದೆ. ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳಾ ಸಬಲೀಕರಣಕ್ಕೆ ವಿಶೇಷ ಆದ್ಯತೆ ಕಲ್ಪಿಸಿದ್ದಾರೆ. ಪ್ರಧಾನ ಮಂತ್ರಿ ಮತ್ಸೃ ಸಂಪದ ಯೋಜನೆ ಕರಾವಳಿಯ ಮೀನುಗಾರರಿಗೆ ವರದಾನವಾಗಲಿದೆ. 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ, 2024ರ ವೇಳೆಗೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಕುಡಿಯುವ ನೀರು ಒದಗಿಸಲು ಹರ್‌ಘರ್ ಜಲ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1.95 ಕೋಟಿ ಮನೆಗಳ ನಿರ್ಮಾಣ, 2022ರ ವೇಳೆಗೆ ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೆ ವಿದ್ಯುತ್ ಮತ್ತು ಎಲ್ಪಿಜಿ ಸಂಪರ್ಕ ಎಲ್ಲವೂ ದೇಶದ ಸರ್ವಾಂಗೀಣ ಅಭಿವೃದ್ದಿಗೆ ಕೈಗೊಂಡ ದಿಟ್ಟ ಕ್ರಮಗಳಾಗಿದೆ. ಮೂಲ ಸೌಕರ್ಯಕ್ಕೆ ಅತಿ ಹೆಚ್ಚು ಆದ್ಯತೆ ನೀಡಿರುವುದು, ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವುದು ಸ್ವಾಗತಾರ್ಹ.
ನಳಿನ್ ಕುಮಾರ್ ಕಟೀಲ್,
ಸಂಸದರು, ದ.ಕ.
ಬಂಡವಾಳಶಾಹಿಗಳಿಗೆ ಪೂರಕ
ಇದು ಬಂಡವಾಳ ಶಾಹಿಗಳಿಗೆ ಪೂರಕವಾದುದು. ದೇಶಾದ್ಯಂತ ಕೃಷಿ ಬಿಕ್ಕಟ್ಟು ಉಂಟಾಗಿದೆ. ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ನವ ಉದಾರೀಕರಣಕ್ಕೆ ಬೆಂಬಲ ನೀಡಲಾಗಿದೆ. ಸಣ್ಣ ಕೈಗಾರಿಕೆಗೂ ಪೂರಕ ವಾತಾವರಣವಿಲ್ಲ. ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಏರಿಕೆಯಾಗುತ್ತಿದ್ದರೂ ಕೂಡ ಅವುಗಳ ನಿಯಂತ್ರಣಕ್ಕೆ ಕ್ರಮವಿಲ್ಲ. ಒಟ್ಟಿನಲ್ಲಿ ಇದು ಜನಪರವಲ್ಲದ ಬಜೆಟ್.
ವಸಂತ ಆಚಾರಿ
ಕಾರ್ಯದರ್ಶಿ
ಸಿಪಿಎಂ ದ.ಕ.ಜಿಲ್ಲೆ
ಶ್ರೀಮಂತರ ಪರ ಬಜೆಟ್
ಶುಕ್ರವಾರ ಮಂಡನೆಯಾದ ಬಜೆಟ್ ಕಾರ್ಪೊರೇಟ್‌ಗಳ ಪರವಾಗಿದೆ. ರೈತರಿಗೆ, ಜನಸಾಮಾನ್ಯರಿಗೆ, ಕಾರ್ಮಿಕರಿಗೆ ಹಾಗೂ ಬಡವರಿಗೆ ಯಾವುದೇ ರೀತಿಯ ಒಳಿತು ಮಾಡಿಲ್ಲ. ಬಜೆಟ್ ಸರಿದೂಗಿಸಲು ದೇಶದ ಆಸ್ತಿಗಳಾದ ಸಾರ್ವಜನಿಕ ಉದ್ಯಮಗಳನ್ನು ಮತ್ತಷ್ಟು ಮಾರಾಟ ಮಾಡುವ ಕ್ರಮ ಮುಂದುವರಿದಿದೆ. ದೇಶದ ಜೀವನಾಡಿಗಳಾದ ರೈಲ್ವೆ, ರಕ್ಷಣೆ ಮುಂತಾದುವಗಳನ್ನು ಖಾಸಗೀಕರಿಸುವ ಪ್ರಕ್ರಿಯೆ ಮುಂದುವರಿದಿದೆ. ಅಂತಾರಾಷ್ಟ್ರೀಯ ಪೆಟ್ರೋಲಿಯಂ ಬೆಲೆಗಳು ಕಡಿಮೆಯಾಗುತ್ತಿದ್ದರೂ ಅದರ ಪ್ರಯೋಜನ ಜನರ ಕೈಗೆಟಕದಂತೆ ಹೊಸ ತೆರಿಗೆ ಹಾಕಲಾಗಿದೆ. ಹಿಂದೆ ದೊಡ್ಡ ಕಂಪೆನಿಗಳಿಗೆ ಮಾತ್ರ ಸಿಗುತ್ತಿದ್ದ ತೆರಿಗೆ ರಿಯಾಯಿತಿಗಳನ್ನು 400 ಕೋಟಿ ನಿರ್ವಹಣೆ ಮಾಡುತ್ತಿರುವ ಕಂಪೆನಿಗಳಿಗೆ ವಿಸ್ತರಿಸಿ ಖಾಸಗಿಯವರಿಗೆ ಮತ್ತಷ್ಟು ಲಾಭಗಳಿಸುವ ಅವಕಾಶ ಮಾಡಿ ಕೊಡಲಾಗಿದೆ. ಹೊಸ ಉದ್ಯೋಗ ಸ್ಟೃಗೆ ಹೆಚ್ಚಿನ ಮಹತ್ವ ಕೊಡದೆ ಯುವಕರಿಗೆ ನಿರಾಶೆಯಾಗಿದೆ. ರೈತರು ಕಾತರದಿಂದ ಕಾಯುತ್ತಿದ್ದ ಸಾಲಮನ್ನಾ ಮಾಡಲೇ ಇಲ್ಲ. ಒಟ್ಟಾರೆಯಾಗಿ ಈ ಬಜೆಟ್ ಖಾಸಗಿ ಕಾರ್ಪರೇಟ್‌ಗಳಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸಿ ಜನಸಾಮಾನ್ಯರನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ.
ವಿ. ಕುಕ್ಯಾನ್
ಕಾರ್ಯದರ್ಶಿ
ಸಿಪಿಐ ದ.ಕ.ಜಿಲ್ಲೆ
ದೇಶವನ್ನೇ ದಿವಾಳಿಯನ್ನಾಗಿಸುವ ಬಜೆಟ್
ಆಧಾರ್ ಕಾರ್ಡ್, ಡಿಜಿಟಲ್, ಎಫ್‌ಡಿಐ ಜೋತು ಬಿದ್ದಿರುವ ಕೇಂದ್ರ ಸರಕಾರ, ಮುದ್ರಾ ಯೋಜನೆಗೆ ಹೆಚ್ಚಿನ ಮಹತ್ವ ನೀಡಿದ್ದು ಹಾಸ್ಯಾಸ್ಪದವಾಗಿದೆ. ಯಾಕೆಂದರೆ ಆ ಯೋಜನೆಯ ಹಿಂದಿನ ಫಲಾನುಭವಿಗಳು ಮತ್ತದರ ಧನಾತ್ಮಕ ಅಂಶಗಳ ಪಟ್ಟಿಯನ್ನು ಇದುವರಗೂ ಬಿಡುಗಡೆಗೊಳಿಸದೆ ತನ್ನೆಲ್ಲಾ ಹಳೆಯ ಯೋಜನೆಗಳಂತೆ ಇದೂ ಒಂದು ಫ್ಲಾಪ್ ಯೋಜನೆಯಾಗಿದೆ. ಬಜೆಟ್‌ನಲ್ಲಿ ಬಿಜೆಪಿ ಎಂದಿನಂತೆ ತನ್ನ ‘ಸಿದ್ಧಾಂತದ ಪರ ಒಲವುಳ್ಳ’ವರ ಬಜೆಟ್ ಮಂಡಿಸಿದೆ. ಬಂಡವಾಳಶಾಹಿಗಳಿಗೆ ಪೂರಕವಾಗಿ ಬಜೆಟ್ ರಚಿಸಿದೆ. ಅಲ್ಲದೆ ಪೆಟ್ರೋಲ್ ಡೀಸೆಲ್ ಮೇಲಿನ ಸೆಸ್ ಅನ್ನು ಏರಿಸುವ ಮೂಲಕ ಕೇಂದ್ರ ಸರಕಾರ, ಆ ಮೂಲಕ ಜನರ ದಿನಬಳಕೆಯ ವಸ್ತುಗಳ ಬೆಲೆಯೇರುವಂತೆ ಮಾಡಿದೆ. ಇದು ಖಂಡಿತವಾಗಿಯೂ ಜನ ಸಾಮಾನ್ಯರ ಮೇಲೆ ಹೆಚ್ಚಿನ ಹೊರೆಯಾಗಿ ಮಾರ್ಪಟ್ಟು ಜೀವನ ನಿರ್ವಹಣೆಯೇ ಕಷ್ಟ ಸಾಧ್ಯವಾಗಬಹುದು. ಒಟ್ಟಿನಲ್ಲಿ ಕೇಂದ್ರ ಸರಕಾರದ ಈ ಬಜೆಟ್ ಜನ ಸಾಮಾನ್ಯರ ಪರವಿಲ್ಲ. ಎಂದಿನಂತೆ ಅದು ಬಂಡವಾಳಶಾಹಿಗಳ ಬೃಹತ್ ಉದ್ಯಮಿಗಳ ಪರವಾಗಿದೆ.
ಅಥಾವುಲ್ಲಾ ಜೋಕಟ್ಟೆ
ಎಸ್‌ಡಿಪಿಐ, ದ.ಕ. ಜಿಲ್ಲಾಧ್ಯಕ್ಷ
ಅತ್ಯುತ್ತಮ ಬಜೆಟ್
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಪ್ರಸಕ್ತ ಅರ್ಥಿಕ ಪರಿಸ್ಥಿಯನ್ನು ಅರ್ಥೈಸಿಕೊಂಡು ಮಂಡಿಸಿದ ಅತ್ಯಂತ ಪರಿಣಾಮಕಾರಿ ಬಜೆಟ್ ಇದಾಗಿದೆ. ಈ ಹಿಂದೆ ಫೆಬ್ರವರಿಯಲ್ಲಿ ಪಿಯೂಷ್ ಗೋಯಲ್ ನೀಡಿದ ‘ಸಭ್ ಕಾ ಸಾಥ್ ಸಭ್ ಕಾ ವಿಕಾಸ್’ನೊಂದಿಗೆ ‘ಸಭ್ ಕಾ ವಿಶ್ವಾಸ್’ನ್ನು ಸೇರಿಸಿ ನೀಡಿರುವ ಅರ್ಥಿಕ ಶಿಸ್ತನ್ನು ರೂಢಿಸಿರುವ ದೂರದೃಷ್ಟಿಯ ಸ್ವಾಗತಾರ್ಹ ಬಜೆಟ್ ಆಗಿದೆ. ತೈಲದ ಮೇಲಿನ ಸೆಸ್ ಹಾಗೂ ಆಮದು ಚಿನ್ನದ ಮೇಲಿನ ಶೇ.12.5 ತೆರಿಗೆ ಸ್ವಲ್ಪಮಟ್ಟಿಗೆ ನಿರಾಶೆಯನ್ನು ಮೂಡಿಸಿದರೂ ಒಂದೇ ದೇಶ ಒಂದೇ ತೆರಿಗೆಯನ್ನು ಅನುಷ್ಠಾನಗೊಳಿಸಿದ ಜಿಎಸ್‌ಟಿ ಈಗಾಗಲೆ ಜನ ಸಾಮಾನ್ಯರು ಉಪಯೋಗಿಸುವ ಎಲ್ಲಾ ವಸ್ತುಗಳ ಮೇಲೆ ತೆರಿಗೆಯನ್ನು ಕಡಿಮೆಗೊಳಿಸಿರುವುದರಿಂದ ಅಷ್ಟೇನೂ ಚಿಂತಿಸಬೇಕಾಗಿಲ್ಲ. ಒಟ್ಟಿನಲ್ಲಿ ಜನಸಾಮಾನ್ಯನ ಮೇಲೆ ಯಾವುದೇ ಭಾರವಿಲ್ಲದೆ ದೇಶದ ಜನತೆ ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕಾದ ಅತ್ಯುತ್ತಮ ಬಜೆಟ್ ಇದಾಗಿದೆ.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಮಾಜಿ ಮುಖ್ಯ ಸಚೇತಕರು
ವಿಧಾನ ಪರಿಷತ್







