ಜು.8: ಪದವಿ ತರಗತಿಯ ತುಳು ಪಠ್ಯ ಪುಸ್ತಕ ‘ಸಿರಿದೊಂಪ’ ಬಿಡುಗಡೆ
ಮಂಗಳೂರು, ಜು.5: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಬೇಡಿಕೆಯಂತೆ ಮಂಗಳೂರು ವಿಶ್ವ ವಿದ್ಯಾನಿಲಯವು 2019-20ರ ಸಾಲಿನಲ್ಲಿ ಪದವಿ ತರಗತಿಗಳಲ್ಲಿ ತುಳು ಭಾಷೆಯನ್ನು ಒಂದು ಐಚ್ಛಿಕ ಭಾಷಾ ವಿಷಯವಾಗಿ ಅನುಷ್ಠಾನಗೊಳಿಸಲು ಅವಕಾಶ ಮಾಡಿಕೊಟ್ಟಿವೆ. ಅದರಂತೆ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪಠ್ಯಪುಸ್ತಕ ಒದಗಿಸುವ ಸಂಕಲ್ಪದೊಂದಿಗೆ ಅಕಾಡಮಿಯ ಸಹಕಾರದೊಂದಿಗೆ ಸಂಪಾದಕ ಮಂಡಳಿಯ ತ್ವರಿತ ಕ್ರಮ ಮತ್ತು ಶ್ರಮದ ಫಲವಾಗಿ ಮೊದಲನೆಯ ಸೆಮಿಸ್ಟರ್‌ನ ತುಳು ಭಾಷಾ ಪುಸ್ತಕ ‘ಸಿರಿ ದೊಂಪ: ತುಡರ್ ಒಂಜಿ ’ ಇದರ ಬಿಡುಗಡೆ ಕಾರ್ಯಕ್ರಮವು ಜು.8ರ ಸಂಜೆ 3:30ಕ್ಕೆ ಅಕಾಡಮಿಯ ಸಿರಿಚಾವಡಿಯಲ್ಲಿ ನಡೆಯಲಿದೆ ಎಂದು ಪಠ್ಯ ಪುಸ್ತಕ ರಚನಾ ಸಮಿತಿಯ ಅಧ್ಯಕ್ಷ ಪ್ರೊ.ಬಿ.ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ‘ಸಿರಿದೊಂಪ:ತುಡರ್ ಒಂಜಿ’ ಪುಸ್ತಕ ಬಿಡುಗಡೆಗೊಳಿಸುವರು. ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಪುಸ್ತಕದ ಪರಿಚಯ ಮಾಡಲಿದ್ದಾರೆ. ಅತಿಥಿಯಾಗಿ ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ. ಖಾನ್ ಭಾಗವಹಿಸುವರು ಎಂದರು.
ಈಗಾಗಲೇ ದ.ಕ. ಮತ್ತು ಉಡುಪಿ ಜಿಲ್ಲೆಯ 44 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2,500ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ತುಳುವನ್ನು ತೃತೀಯ ಭಾಷೆಯಾಗಿ ಕಲಿಯುತ್ತಿದ್ದಾರೆ. 2012-13ನೇ ಸಾಲಿನಿಂದ ಆರಂಭವಾದ ತುಳು ಕಲಿಕೆಯ ಮೊದಲನೆಯ ಬ್ಯಾಚ್ 2014-15ರಲ್ಲಿ ಎಸೆಸೆಲ್ಸಿ ಪೂರೈಸಿತ್ತು. ಈವರೆಗೆ 5 ಬ್ಯಾಚ್‌ಗಳು ಪೂರೈಸಿದ್ದು, 1,361 ವಿದ್ಯಾರ್ಥಿಗಳು ತುಳುವನ್ನು ಅಧ್ಯಯನ ಮಾಡಿದ್ದಾರೆ ಎಂದು ಎ.ಸಿ.ಭಂಡಾರಿ ನುಡಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಪ್ರಭಾಕರ್ ನೀರುಮಾರ್ಗ, ತಾರಾನಾಥ್ ಗಟ್ಟಿ ಕಾಪಿಕಾಡ್ ಉಪಸ್ಥಿತರಿದ್ದರು.







