ಭಾರತೀಯ ತೀಯಾ ಸಮಾಜದ ಕೇಂದ್ರ ಸಮಿತಿಗೆ ಆಯ್ಕೆ

ಮಂಗಳೂರು, ಜು.5: ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯದ ಹಾಗೂ ದ.ಕ., ಕಾಸರಗೋಡು, ಬೆಂಗಳೂರು, ಮುಂಬೈ ಮತ್ತು 18 ಭಗವತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಧಿಕ ಸದಸ್ಯರನ್ನು ಹಾಗೂ ವಲಯ ಸಮಿತಿಯನ್ನು ಹೊಂದಿರುವ ಭಾರತೀಯ ತೀಯಾ ಸಮಾಜದ ಕೇಂದ್ರ ಸಮಿತಿಯ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಮಂಗಳೂರಿನ ಜೆಪ್ಪು ಸಂಕಪ್ಪ ಮೆಮೋರಿಯಲ್ ಹಾಲ್ನಲ್ಲಿ ಜರುಗಿತು.
ಬಂದಿಯೋಡು ಭಗವತಿ ಕ್ಷೇತ್ರದ ಆಚಾರಪಟ್ಟವರಾದ ಮೋನಪ್ಪಬೆಳ್ಚಪ್ಪಾಡ ಸಭೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಮುಂದಿನ 3 ವರ್ಷದ ಅವಧಿಗೆ ಸಮಿತಿಯ ಅಧ್ಯಕ್ಷರಾಗಿ ಸದಾಶಿವ ಉಳ್ಳಾಲ್, ಉಪಾಧ್ಯಕ್ಷರಾಗಿ ರಾಜ್‌ಗೋಪಾಲ್, ಕಾಸರಗೋಡಿನ ಸತೀಶನ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರೇಮ್ಚಂದ್ರ, ಜೊತೆ ಕಾರ್ಯದರ್ಶಿಯಾಗಿ ಕುದ್ರೋಳಿ ಭಗವತಿ ಕ್ಷೇತ್ರದ ಕಾರ್ಯದರ್ಶಿ ಸುಧೀರ್ ಮಂಗಳೂರು ಮತ್ತು ಉಪ್ಪಳ ಶ್ರೀಭಗವತಿ ಕ್ಷೇತ್ರದ ರಾಮಚಂದ್ರ, ಕೋಶಾಧಿಕಾರಿಯಾಗಿ ಪಿಲಿಕುನ್ನು ಭಗವತಿ ಕ್ಷೇತ್ರದ ಜನಾರ್ದನ.ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ತೀಯಾ ಸಮಾಜದ ಹಿರಿಯರಾದ ರಾಮ್ದಾಸ್, ದಾಮೋದರ್ ಉಳ್ಳಾಲ್, ಕೆ.ಪುರುಷೋತ್ತಮ್ ಎನ್. ದಾಸ್ ಮಾಡ, ಜನಾರ್ದನ ಪುತ್ತೂರು ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.





