ರಾಜೀವ್ ಗಾಂಧಿ ಹತ್ಯೆ ಪ್ರಕರಣ: ನಳಿನಿಗೆ 1 ತಿಂಗಳು ಪರೋಲ್

ಚೆನ್ನೈ, ಜು. 5: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್‌ಗೆ ಮದ್ರಾಸ್ ಉಚ್ಚ ನ್ಯಾಯಾಲಯ ಒಂದು ತಿಂಗಳು ಪರೋಲ್ ನೀಡಿದೆ.
ಪುತ್ರಿಯ ವಿವಾಹ ಸಿದ್ಧತೆ ಮಾಡಲು ಪರೋಲ್ ನೀಡುವಂತೆ ಕೋರಿ ನಳಿನಿ ಶ್ರೀಹರನ್ ವೈಯಕ್ತಿಕವಾಗಿ ನ್ಯಾಯಾಲಯದ ಮುಂದೆ ಹಾಜರಾಗಿ ಮನವಿ ಮಾಡಿದ್ದರು. 10 ದಿನಗಳ ಒಳಗೆ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಅಂತಿಮಗೊಳಿಸುವಂತೆ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಹಾಗೂ ನ್ಯಾಯಮೂರ್ತಿ ಎಂ. ನಿರ್ಮಲ್ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ತಮಿಳುನಾಡು ಸರಕಾರಕ್ಕೆ ನಿರ್ದೇಶಿಸಿದೆ.
ಪರೋಲ್‌ನಲ್ಲಿರುವಾಗ ಯಾವುದೇ ಸಂದರ್ಶನ ನೀಡಬಾರದು ಹಾಗೂ ಯಾವುದೇ ರಾಜಕಾರಣಿಯನ್ನು ಭೇಟಿಯಾಗಬಾರದು ಎಂದು ನ್ಯಾಯಾಲಯ ನಳಿನಿ ಶ್ರೀಹರನ್‌ಗೆ ಆದೇಶಿಸಿದೆ.
ನ್ಯಾಯಾಲಯದ ಮುಂದೆ ಪ್ರತ್ಯಕ್ಷವಾಗಿ ಹಾಜರಾಗಲು ಹಾಗೂ ಮನವಿ ಬಗ್ಗೆ ವಾದಿಸಲು ಪೀಠ ಅನುಮತಿ ನೀಡಿ ಜೂನ್ 25ರಂದು ನೀಡಿದ ಆದೇಶ ಅನುಸರಿಸಿ ನಳಿನಿಯನ್ನು ಬಿಗಿ ಭದ್ರತೆಯಲ್ಲಿ ನ್ಯಾಯಾಲಯದ ಮುಂದೆ ಕರೆ ತರಲಾಯಿತು.
ನಳಿನಿ ಕಳೆದ 27 ವರ್ಷಗಳಿಂದ ವೆಲ್ಲೂರಿನಲ್ಲಿರುವ ವಿಶೇಷ ಮಹಿಳಾ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಪುತ್ರಿಯ ವಿವಾಹ ಸಿದ್ಧತೆ ಮಾಡಲು 6 ತಿಂಗಳು ರಜೆ ನೀಡಬೇಕು ಎಂದು ನಳಿನಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಳು.







