ಕೈದಿಯ ಹತ್ಯೆ ಪ್ರಕರಣ: 11 ಮಾಜಿ ಪೊಲೀಸರು ಸೇರಿ 13 ಮಂದಿ ದೋಷಿಗಳು

ಅಮೃತಸರ,ಜು.6: ಕೈದಿಯೋರ್ವನನ್ನು ಅಪಹರಿಸಿ ಹತ್ಯೆಗೈದಿದ್ದ ಐದು ವರ್ಷಗಳ ಹಿಂದಿನ ಪ್ರಕರಣದಲ್ಲಿ 11 ಮಾಜಿ ಪೊಲೀಸರು ಸೇರಿದಂತೆ 13 ಜನರನ್ನು ದೋಷಿಗಳೆಂದು ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಘೋಷಿಸಿದೆ. ನ್ಯಾ.ಸಂದೀಪ್ ಸಿಂಗ್ ಬಾಜ್ವಾ ಅವರು ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದಾರೆ.
ಅಪರಾಧಿಗಳೆಂದು ಘೋಷಿಸಲ್ಪಟ್ಟವರಲ್ಲಿ ಓರ್ವ ಮಾಜಿ ಇನ್ಸ್‌ಪೆಕ್ಟರ್, ಇಬ್ಬರು ಎಎಸ್‌ಐಗಳು, ಮೂವರು ಹೆಡ್ ಕಾನ್‌ಸ್ಟೇಬಲ್‌ಗಳು ಮತ್ತು ಐವರು ಕಾನ್‌ಸ್ಟೇಬಲ್‌ಗಳು ಸೇರಿದ್ದಾರೆ.
ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಕೈದಿ ಬಿಕ್ರಮಜಿತ್ ಸಿಂಗ್‌ನನ್ನು 2014,ಮೇ 5ರಂದು ಚಿಕಿತ್ಸೆಗಾಗಿ ಇಲ್ಲಿಯ ಆಸ್ಪತ್ರೆಗೆ ಕರೆತರಲಾಗಿತ್ತು. ಮಾಜಿ ಇನ್ಸ್‌ಪೆಕ್ಟರ್ ನಾರಂಗ್ ಸಿಂಗ್ ನೇತೃತ್ವದ ಪೊಲೀಸ್ ತಂಡವು ಸಿಂಗ್‌ನನ್ನು ಆಸ್ಪತ್ರೆಯಿಂದ ಅಪಹರಿಸಿ ಬಟಾಲಾಗೆ ಕರೆದೊಯ್ದಿತ್ತು. ಅಲ್ಲಿ ಆತನಿಗೆ ಚಿತ್ರಹಿಂಸೆಯನ್ನು ನೀಡಿ ಕೊಲ್ಲಲಾಗಿತ್ತು. ಈ ಬಗ್ಗೆ ಸಿಂಗ್ ಸೋದರ ದಲ್ಬೀರ್ ಸಿಂಗ್ ದೂರು ದಾಖಲಿಸಿದ್ದರು.
ಸಿಂಗ್ ಅಪಹರಣದ ಬಳಿಕ ಪೊಲೀಸರು ಆತ ಆಸ್ಪತ್ರೆಯ ಆವರಣದಲ್ಲಿ ಪೊಲೀಸರ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು 2014,ಮೇ 6ರಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆದರೆ ತನಿಖೆಯ ಬಳಿಕ 12 ಪೊಲೀಸರು ಮತ್ತು ಇತರ ಇಬ್ಬರ ವಿರುದ್ಧ ಕೊಲೆ ಆರೋಪದಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಆರೋಪಿಗಳ ಪೈಕಿ ಎಎಸ್‌ಐ ಬಲ್ಜಿತ್ ಸಿಂಗ್ ಎಂಬಾತ ತಲೆಮರೆಸಿಕೊಂಡಿದ್ದು,ಆತನನ್ನು ಇನ್ನಷ್ಟೇ ಬಂಧಿಸಬೇಕಿದೆ.





