Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಮುಂಗಾರು ಮಳೆ ತಂದ ಮೋಜು ಆತಂಕ,ಅವಾಂತರ

ಮುಂಗಾರು ಮಳೆ ತಂದ ಮೋಜು ಆತಂಕ,ಅವಾಂತರ

ಶ್ಯಾಮಲಾ ಮಾಧವ, ಮುಂಬೈಶ್ಯಾಮಲಾ ಮಾಧವ, ಮುಂಬೈ7 July 2019 9:31 AM IST
share
ಮುಂಗಾರು ಮಳೆ ತಂದ ಮೋಜು ಆತಂಕ,ಅವಾಂತರ

ರಸ್ತೆಗಳಲ್ಲಿ, ವಸತಿ ಸಮುಚ್ಚಯಗಳಲ್ಲಿ, ಶಾಲೆಗಳಂಗಣದಲ್ಲಿ ತುಂಬಿದ ಪ್ರವಾಹ, ನಿಂತ ರೈಲುಗಳು, ಗಂಟೆಗಟ್ಟಲೆ ಕಾದಿರುವ ಜನರು, ಕುಸಿದ ಗೋಡೆಗಳು, ನಾಶವಾದ ಮನೆಗಳು, ಹತರಾದ ಜನರು, ಉಳಿಸಿ ಎಂದು ಕರೆಕರೆದು, ಗಂಟೆಗಳ ಬಳಿಕ ಅವಶೇಷದಿಂದ ಕೊನೆಗೂ ಹೊರತಂದಾಗ ಇಲ್ಲವಾದ ತರಳೆ! ಅತ್ಯಂತ ಸಿರಿವಂತ ಸಂಸ್ಥೆಯಾಗಿದ್ದೂ ವಿಫಲವಾದ ಬಿ.ಎಮ್.ಸಿ.! ಇದು ನಮ್ಮ ಮುಂಬೈ!

ಪಡುವಣ ತೀರದ ಕನ್ನಡ ನಾಡಿನ ಕಾರ್ಗಾಲದ ವೈಭವ ಬಿಡಿ, ಕುರುಹೂ ಇರದ ಈ ವರ್ಷದ ನನ್ನೂರಿನ ಜೂನ್ ತಿಂಗಳ ಪೂರ್ತಿಯ ಬಿಸಿಲು, ಸೆಕೆಯಿಂದ ದೂರಾಗಿ ಮರಳಿ ಮುಂಬೈ ಸೇರಿದಾಗ, ಇಲ್ಲಿ ಮಳೆ ಅವತರಿಸಿ ಅದಾಗಲೇ ದಿನಗಳೆರಡು ಕಳೆದಿತ್ತು. ತಂಪು ತಂಪು ವಾತಾವರಣ; ಕುಳಿರ್ಗಾಳಿ. ಹನಿ ಕಡಿಯದ ಮಳೆ. ಹೃದಯ ಹಕ್ಕಿಯಂತೆ ಹಗುರಾಯ್ತು. ಸಾಮಾನ್ಯವಾಗಿ ಊರಲ್ಲಿ ಮುಂಗಾರು ಆರಂಭವಾದ ವಾರದ ನಂತರವಷ್ಟೇ ಮುಂಬೈಗೆ ಕಾಲಿಡುತ್ತದೆ, ಮಳೆ. ಅಂತಲ್ಲಿ ಈ ವರ್ಷದ ಈ ಪರಿ ದಿಗಿಲೆನಿಸುವಂತಿದೆ. ಕಳೆದ ವರ್ಷ ಮೂರ್ನಾಲ್ಕು ಮಳೆಯಾದ ಬಳಿಕವೂ ಊರ ಮನೆಯ ಬಾವಿಯಲ್ಲಿ ಒಸರು ಜಿನುಗದೆ ಮಳೆ ನೀರಷ್ಟೇ ತುಂಬುತ್ತಾ ಬಂದು ಅಚ್ಚರಿ ಮೂಡಿಸಿತ್ತು. ಅಂತ ರ್ಜಲ ಬತ್ತಿದ ಚಿತ್ರ ಕಣ್ಣೆದುರಿತ್ತು. ಈ ವರ್ಷ ಜುಲೈ ಕಾಲಿರಿಸಿದರೂ ಕಾರ್ಗಾಲ ಕಣ್ಮರೆ! ಅದೇ ನಮ್ಮ ಮುಂಬೈಯಲ್ಲಿ ವರುಣಾವತಾರ!

ಮೂವತ್ತರ ಸಂಜೆ ಮುಲುಂಡ್‌ನ ಕಾಳಿದಾಸ ಭವನದಲ್ಲಿ ನಮ್ಮೂರ ಪ್ರಾದೇಶಿಕ ಚಲನಚಿತ್ರ ‘ನಿಲಾವುಂಡೆ ಬೆಳಿ’ ನೋಡಿ ಹಿಂದಿರುಗುವಾಗ ರಾತ್ರಿ ಒಂದು ಗಂಟೆಗೆ ಸುರಿದ ಜಡಿಮಳೆಯ ಪ್ರವಾಹಕ್ಕೆ ವಾಹನ ಚಾಲಕ ಪಾಡುಪಟ್ಟರೂ, ನಾನಂತೂ ಅತಿಶಯ ಆನಂದವನ್ನನುಭವಿಸಿದೆ. ನಾಲ್ಕು ಮಾಳಿಗೆಯೇರಿ ಮನೆಯೊಳಗೆ ಬಂದು ಸೀರೆ ಬದಲಿಸಲು ಕೋಣೆ ಸೇರಿದರೆ ನನ್ನ ಉತ್ಸಾಹದ ಬೆಲೂನಿಗೆ ಸೂಜಿ ಚುಚ್ಚಿದಂತೆ ಠುಸ್ಸಾಯಿತು. ಕಟ್ಟಡ ದುರುಸ್ತಿ, ಮನೆಯೊಳಗೂ ದುರುಸ್ತಿ, ಸಾರಣೆ, ಬಣ್ಣ ಎಲ್ಲ ನಡೆದು ಅಂದವಾಗಿ ಹೆಮ್ಮೆಯೆನಿಸುತ್ತಿದ್ದ ಮನೆಯ ದುರವಸ್ಥೆ ಕಣ್ಣೆದುರು ಸಾಕಾರಗೊಂಡಿತ್ತು. ನನ್ನ ಕೋಣೆಗಳ ಬಾಲ್ಕನಿಗಳ ಸೀಲಿಂಗ್‌ನಿಂದ ತೊಟ್ಟಿಕ್ಕ ತೊಡಗಿದ ನೀರು ಕ್ರಮೇಣ ಜಲಧಾರೆಯೇ ಆಗಿತ್ತು. ಒಳಗಣ ಸ್ಪೇಸ್ ಹೆಚ್ಚಿಸಲೆಂದು ಬಾಲ್ಕನಿಗೆ ತಳ್ಳಿದ್ದ ಗಾಡ್ರೆಜ್ ಕಪಾಟುಗಳ ಮೇಲಿರಿಸಿದ್ದ ಪೈಲುಗಳ ಕಟ್ಟುಗಳು, ಇತರ ವಸ್ತುಗಳೆಲ್ಲ ಜಳಕಕ್ಕೆ ತೊಡಗಿದಂತಿದ್ದುವು. ನೀರು ಬಾಲ್ಕನಿ ತುಂಬಿ ಒಳ ಹರಿಯಲಾರಂಭಿಸಿತ್ತು. ಕಳೆದ ವರ್ಷದಂತೆ ಮೇಲ್ಮಹಡಿಯಲ್ಲಿನ ಮನೆಯಾತನಿಲ್ಲದ ಮನೆಯೊಳಗೆ ನೀರು ತುಂಬಿರಬೇಕು. ಅದರ ವರಪ್ರಸಾದ ನಮಗೆ, ಎಂದುಕೊಂಡು ಹೋಗಿ ನೋಡಿದರೆ ನಮ್ಮ ಊಹೆ ನಿಜವಾಗಿತ್ತು. ರೆನೊವೇಶನ್‌ನಲ್ಲಿ ಬಳಸಿದ ಸಿಮೆಂಟ್ ಅವರ ಬಾಲ್ಕನಿಯ ನೀರು ಹೊರಬಿಡುವ ಪೈಪನ್ನು ಮುಚ್ಚಿ, ನೀರು ಒಳಗೆ ಜಮಾವಣೆಯಾಗಿ ಅಧೋಲೋಕವಾದ ನಮ್ಮ ಮೇಲೆ ಸುರಿಯಲಾರಂಭಿಸಿತ್ತು. ಅವರ ಅಡಿಗೆ ಮನೆ ಬಾಲ್ಕನಿಯ ಗಾಜು ಒಡೆದು ತೆರೆದ ದ್ವಾರದಿಂದ ಒಳ ಸೇರಿದ ನೂರಾರು ಪಾರಿವಾಳಗಳು ಜನರಿರದ ಮನೆಯೊಳಗೆ ತಮ್ಮ ವಾಸ್ತವ್ಯ ನಿರ್ಮಿಸಿದ್ದುವು. ಆ ಕೋಣೆಯೊಳಗೆ ಕಾಲಿಡುವಂತಿರಲಿಲ್ಲ. ಹೀಗಾಗಿ ನಮ್ಮ ಅಡುಗೆಮನೆ ಬಾಲ್ಕನಿಗೂ ನೀರಧಾರೆ! ಕೆಳಗೆ ನಾಲ್ಕನೇ ಮಹಡಿಯ ನಮ್ಮೆರಡು ಫ್ಲಾಟ್‌ಗಳು ಒಂದಾದ ವಿಸ್ತಾರದ ಹಲವು ಕೋಣೆಗಳ ವಿಶಾಲ ಮನೆಯಾದರೂ, ಲಿಫ್ಟ್ ಇರದ ಕಟ್ಟಡದಲ್ಲಿ ಐದು ಮಹಡಿ ಏರುವ ಕಷ್ಟಕ್ಕೆ ಬದಲಾಗಿ ಬೆಂಗಳೂರಲ್ಲಿ ನೆಲೆಯಾಗಿದ್ದರು, ಸೊಮಾನೀಜೀ. ಕಟ್ಟಡ ರೀಡಿವೆಲಪ್‌ಮೆಂಟ್‌ಗೆ ಹೋಗಲಿರುವುದರಿಂದ (ಎಂದೋ ಯಾರು ಬಲ್ಲರು?) ಟೆರೆಸ್‌ನಲ್ಲಿ ನಡೆದ ಅಗ್ಗದ ದುರುಸ್ತಿ ನೀರಲ್ಲಿ ಮಾಡಿದ ಹೋಮದಂತಾಗಿತ್ತು. ಏನೋ ನಿಮಿತ್ತ ಮೆರೀನ್ ಲೈನ್ಸ್‌ನ ತನ್ನ ಬೆಲೆಬಾಳುವ ಮನೆ ತೊರೆದು, ಇಲ್ಲಿಗೆ ವಾಸಕ್ಕೆ ಬಂದಿದ್ದರು ಸೊಮಾನೀಜೀ. ದಿನಂಪ್ರತಿ ಐದು ಮಾಳಿಗೆಗಳನ್ನೇರುವ ಪ್ರಯಾಸದಲ್ಲಿ ತೊಂಬತ್ತೆರಡರ ಹರೆಯದಲ್ಲಿ ಒಂದಿನ ಮೆಟ್ಟಲುಗಳಲ್ಲೇ ಕುಸಿದು ಹರಿಪಾದ ಸೇರಿದ್ದರು. ಮಗ ಐದು ಮಾಳಿಗೆ ಮೆಟ್ಟಲುಗಳನ್ನು ಏರಲೊಲ್ಲದೆ, ಮಾರಿ ಬಿಡುವ ಯೋಚನೆಯಲ್ಲಿದ್ದರೂ, ಎಲ್ಲ ಅನುಕೂಲತೆಗಳಿರುವ ಪ್ರದೇಶವಾದರೂ, ಲಿಫ್ಟ್ ಇರದ ಮೇಲಂತಸ್ತಿನ ಮನೆ ಯಾರಿಗೂ ಬೇಡವಾಗಿ, ವಿಶಾಲ ಮನೆ ಪಾಳು ಬಿದ್ದಂತಿದೆ! ಈಗ ಟೆರೆಸ್‌ನಿಂದ ಸೋಮಾನಿ ಮನೆಗೆ, ಅಲ್ಲಿಂದ ನಮ್ಮ ಮನೆಗೆ ಗಂಗಾವತರಣವಾಗಿತ್ತು. ನಮ್ಮೂರು ಮಂಗಳೂರ ಬಹುಮಹಡಿ ಕಟ್ಟಡಗಳೆಲ್ಲ ಟೆರೆಸ್ ಮೇಲೆ ಸುಭದ್ರ ಶೇಡ್ ಹೊತ್ತು, ಮಳೆ, ಬಿಸಿಲಿನಿಂದ ಪಾರಾಗಿ ಕಟ್ಟಡದ ಬಾಳಿಕೆಗೆ ಇಂಬಾಗುತ್ತವೆ. ಇಲ್ಲಿ ಮುಂಬೈಯಲ್ಲಿ ಕಟ್ಟಡಗಳ ಟೆರೆಸ್‌ಗೆ ಶೇಡ್ ಹಾಕಲು ಬಿ.ಎಮ್.ಸಿ. ಅನುಮತಿಯಿಲ್ಲ. ಹೀಗಾಗಿ ಮನೆಗಳು ಸೋರುವುದು ಇಲ್ಲಿ ಸರ್ವೇ ಸಾಮಾನ್ಯ. ಬಹುಮಹಡಿ ಹೊಸ ಕಟ್ಟಡಗಳು, ಹಳೆ ಕಟ್ಟಡಗಳು, ಚಾಲ್‌ಗಳು, ರೆಪಡಾಗಳು - ಇಡಿಯ ಮುಂಬೈಯೇ ಹೊದ್ದುಕೊಂಡ ನೀಲಿ ಪ್ಲಾಸ್ಟಿಕ್ ಹೊದಿಕೆ ಮಯ! ಬದಲಿಗೆ ಬಿ.ಎಮ್.ಸಿ. ತನ್ನ ನಿಯಮದಲ್ಲಿ ಬದಲಾವಣೆ ತರಬಾರದೇಕೋ ನಾನರಿಯೆ!

ರಾತ್ರಿಯಿಡೀ ಅವ್ಯಾಹತವಾಗಿ ಹೊಡೆದ ಮಳೆ ಮರುದಿನವೂ ಅದೇ ಬಿರುಸಿನಿಂದ ಮುಂದುವರಿದಿತ್ತು. ಊರಿಂದ ಬರುವ ದಾರಿಯಲ್ಲಿ ಕೊಂಕಣ ಪ್ರವೇಶಿಸಿದಂತೆ ಸುರಿಯುತ್ತಿದ್ದ ಮಳೆ, ಖಂಡಾಲಾದ ಬೆಟ್ಟಗಳಲ್ಲಿ ಧುಮುಕಿ ಚೆಲ್ಲಿದ ನಯನ ಮನೋಹರ ಜಲಪಾತಗಳು, ಊರಲ್ಲಿ ಮಳೆಗಾಗಿ ಹಂಬಲಿಸಿದ ಪರಿತಾಪವನ್ನು ತಣಿಸಿದಂತೇ, ಮತ್ತೂ ಮಳೆಯ ಭಾಗ್ಯ ನನ್ನ ನಗರದ ಪಾಲಿಗಿತ್ತು. ಬಿಡದೆ ಹೊಡೆದ ಮಳೆಯಲ್ಲೇ ಮರು ಮಧ್ಯಾಹ್ನ ಕಾರ್ಯನಿಮಿತ್ತ ಚಾಂದಿವಿಲಿಗೆ ಹೋಗಿ, ಲ್ಯಾಪ್‌ಟಾಪ್ ಇಟ್ಟು ಹೋಗಲೆಂದು ಬಂದು, ರಜಾದಿನಗಳ ಪರಿಪಾಠದಂತೆ ರೂಯಿಯಾ ಕಾಲೇಜ್ ಹರಟೆಕಟ್ಟೆಗೆಂದು ಮಗ ತುಷಾರ್ ಹೊರಟುಹೋದ. ಮಳೆಯೆಂಬ ಎಚ್ಚರಿಕೆಗೆ, ಏನೂ ಇಲ್ಲಮ್ಮಾ, ಇನ್ನೀಗ ನಿಲ್ಲುವಂತಿದೆ ಎಂದ. ಅವನು ಹೋದ ಬೆನ್ನಿಗೇ ಆಕಾಶವೇ ಹರಿದಂತೆ ಧೋ, ಧೋ ಎಂದು ಸತತ ಮಳೆ ಸುರಿಯಿತು. ಸಯಾನ್ ಗುರುಕೃಪಾ ಹೊಟೇಲ್ ತೇಲುವ ಖಾನಾವಳಿ ಆಗಿದೆ ಎಂದು ವಾಟ್ಸ್‌ಆ್ಯಪ್ ಫೋಟೊ ಬಂತು. ತುಷಾರ್‌ಗೆ ಕರೆ ಮಾಡಿದರೆ, ಇಲ್ಲೇನೂ ಇಲ್ಲಮ್ಮಾ; ನೀವು ವಾಟ್ಸ್‌ಆ್ಯಪ್ ನೋಡಬೇಡಿ, ಅಂದ. ನನ್ನ ಕೋಣೆಯೊಳಗೆ ನೀರ ಸುರಿಮಳೆ ಹೆಚ್ಚ ತೊಡಗಿತು. ಎ.ಎನ್.ಮೂರ್ತಿರಾಯರ ಶಬ್ದಗಳು ಲಲಿತ ಪ್ರಬಂಧವನ್ನು ನೆನೆದು, ಟಬ್, ಪಾತ್ರೆ, ಬಾಲ್ದಿಗಳನ್ನು ನೆಲದ ಮೇಲೂ, ಕಪಾಟಿನ ಮೇಲೂ ಇರಿಸಿ ಶಬ್ದ ತರಂಗವನ್ನಾಲಿಸಿ ಸುಖಿಸಿದೆ. ಹನ್ನೆರಡೂವರೆಗೆ ತುಷಾರ್‌ನ ಕರೆ ಬಂತು: ‘‘ಮಾಟುಂಗಾ ಸ್ಟೇಶನ್‌ನಲ್ಲಿ ರೈಲಿನಲ್ಲಿ ಕುಳಿತಿದ್ದೇನೆ. ನಿತಿನ್ ಜೊತೆಗಿದ್ದಾನೆ. ಇಲ್ಲೇನೂ ನೀರಿಲ್ಲ; ಕುರ್ಲಾದಲ್ಲಿ ಸ್ವಲ್ಪ ನೀರಿದೆಯೆಂದು ರೈಲು ಹೊರಡುತ್ತಿಲ್ಲವಷ್ಟೇ. ಅದು ಹೊರಟಾಗ ಬಂದು ಮುಟ್ಟುತ್ತೇನೆ. ನೀವು ಮಲಗಿ ನಿದ್ದೆ ಮಾಡಿ’’ ಎಂದ. ‘‘ರೈಲು ಹೊರಟು ನಡುವೆ ನಿಂತರೆ ಇಳಿಯ ಬೇಡ’’ ಎಂದರೆ, ‘‘ಇಲ್ಲ, ಇಲ್ಲ, ಇಳಿಯುವುದಿಲ್ಲ. ಹಾಗೆ ನಿಂತರೆ, ರೈಲಲ್ಲೇ ಮಲಗ್ತೇವೆ; ನೀವು ಕಾಯುತ್ತಿರಬೇಡಿ, ಮಲಗಿ. ಮೊಬೈಲ್ ಚಾರ್ಜ್ ಔಟ್ ಆಗಲಿದೆ. ಫೋನ್‌ಗೆ ಕಾಯಬೇಡಿ’’ ಎಂದ. ಪರಿಸ್ಥಿತಿ ಅರಿಯುವ ಎಂದರೆ ಟಾಟಾ ಸ್ಕೈ ಟಿ.ವಿ, ಮಳೆ, ಮೋಡವೆಂದು ಕೈ ಕೊಟ್ಟಿತ್ತು. ರಾತ್ರಿ ಎರಡೂವರೆಗೆ ಕರೆಗಂಟೆ ಶಬ್ದಿಸಿದಾಗ ಉಸಿರೆಳೆದುಕೊಂಡೆ. ತುಷಾರ್ ಸಂಪೂರ್ಣ ಒದ್ದೆಯಾಗಿದ್ದುದು ಮೇಲಿಂದ ಸುರಿದ ಮಳೆ ನೀರಲ್ಲೋ, ಬೀದಿಯ ಪ್ರವಾಹದಲ್ಲೋ ಅರಿಯುವಂತೆ ಇರಲಿಲ್ಲ. ರೈಲು ಹೊರಡುವಂತಿಲ್ಲವೆಂದು ಇಳಿದು, ಹೇಗೋ ಟ್ಯಾಕ್ಸಿ ಹಿಡಿದಿದ್ದರು, ಗೆಳೆಯರು. ಥಾನಾಕ್ಕೆ ಹೋಗುವ ಟ್ಯಾಕ್ಸಿಯಿಂದ ಚೆಂಬೂರಲ್ಲಿಳಿದು ನಡೆಯ ತೊಡಗಿದ ತುಷಾರ್‌ನನ್ನು ಬೈಕ್‌ನಲ್ಲಿ ಬಂದ ಹುಡುಗರು ಮನೆ ತಲುಪಿಸಿದ್ದರು. ಇಂಥ ವೇಳೆಯಲ್ಲಿ ಜನಸೇವೆ ಗೆಂದೇ ಮುಂದಾಗುವ ಘಾಟ್‌ಕೋಪರ್ ಹುಡುಗರ ದಂಡಿನ ತರುಣರು. ಅಪರಾತ್ರಿಯಲ್ಲಿ ಹೀಗೆ ಆಪದ್ಬಾಂಧವರಾಗಿ ಬಂದವರು ಎಜುಕೇಟೆಡ್ ತರುಣರೇ, ಎಂದು ಕೇಳಿದೆ. ಹೌದು, ಮತ್ತೆ? ಆದರೆ, ಹೊರಗಿಳಿಯ ಬೇಡ; ಎಲ್ಲೂ ಹೋಗಬೇಡ; ಜಾಗ್ರತೆ, ಎಂದು ತಡೆಯುವ ಅಮ್ಮಂದಿರು ಅವರ ಮನೆಯಲ್ಲಿಲ್ಲ, ಎಂದು ತುಷಾರ್ ನಕ್ಕ. ಆ ಆಪದ್ಬಾಂಧವರಿಗೆ ಮನದಲ್ಲೇ ಕೈಮುಗಿದೆ.

 ಮರುಬೆಳಗು ಟಿ.ವಿ., ಪತ್ರಿಕೆ ಎಲ್ಲ ಚಿತ್ರವನ್ನೂ ಬಿಡಿಸಿಟ್ಟಿತ್ತು. ಮಾಟುಂಗಾದಲ್ಲಿ, ಅಂತೆಯೇ ಉಳಿದೆಡೆಗಳಲ್ಲಿ ರಸ್ತೆಗಳಲ್ಲಿ, ವಸತಿ ಸಮುಚ್ಚಯಗಳಲ್ಲಿ, ಶಾಲೆಗಳಂಗಣದಲ್ಲಿ ತುಂಬಿದ ಪ್ರವಾಹ, ನಿಂತ ರೈಲುಗಳು, ಗಂಟೆಗಟ್ಟಲೆ ಕಾದಿರುವ ಜನರು, ಕುಸಿದ ಗೋಡೆಗಳು, ನಾಶವಾದ ಮನೆಗಳು, ಅವುಗಳಲ್ಲಿ, ರಸ್ತೆಗಳಲ್ಲಿ, ವಾಹನಗಳಲ್ಲಿ ಹತರಾದ ಜನರು, ಉಳಿಸಿ ಎಂದು ಕರೆಕರೆದು, ಗಂಟೆಗಳ ಬಳಿಕ ಅವಶೇಷದಿಂದ ಕೊನೆಗೂ ಹೊರತಂದಾಗ ಇಲ್ಲವಾದ ತರಳೆ! ಅತ್ಯಂತ ಸಿರಿವಂತ ಸಂಸ್ಥೆಯಾಗಿದ್ದೂ ವಿಫಲವಾದ ಬಿ.ಎಮ್.ಸಿ.! ಇದು ನಮ್ಮ ಮುಂಬೈ!

share
ಶ್ಯಾಮಲಾ ಮಾಧವ, ಮುಂಬೈ
ಶ್ಯಾಮಲಾ ಮಾಧವ, ಮುಂಬೈ
Next Story
X