ಎನ್‌ಐಎ ಕಾಯ್ದೆ ತಿದ್ದುಪಡಿಗೆ ಲೋಕಸಭೆಯಲ್ಲಿ ಮಸೂದೆ ಮಂಡನೆ

ಹೊಸದಿಲ್ಲಿ, ಜು.8: ಭಾರತೀಯರನ್ನು ತ್ತು ಭಾರತೀಯ ಹಿತಾಸಕ್ತಿಯನ್ನು ಗುರಿಯಾಗಿಸಿ ನಡೆಸುವ ಉಗ್ರ ದಾಳಿಯ ಬಗ್ಗೆ ಜಗತ್ತಿನ ಯಾವುದೇ ಭಾಗದಲ್ಲೂ ತನಿಖೆ ನಡೆಸುವ ಅಧಿಕಾರವನ್ನು ನೀಡುವ ಮೂಲಕ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.
ಈ ಕಾಯ್ದೆಯಿಂದ ಸೈಬರ್ ಅಪರಾಧ ಮತ್ತು ಮಾನವ ಕಳ್ಳಸಾಗಾಣಿಕೆಯಂತಹ ಪ್ರಕರಣಗಳ ತನಿಖೆ ನಡೆಸಲೂ ಎನ್‌ಐಎಗೆ ಸಾಧ್ಯವಾಗಲಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ತಿದ್ದುಪಡಿ) ಮಸೂದೆ, 2019 ಅನ್ನು ಲೋಕಸಭೆಯಲ್ಲಿ ಪರಿಚಯಿಸುವ ವೇಳೆ ಸಹಾಯಕ ಗೃಹ ಸಚಿವ ಜಿ.ಕಿಶನ್ ರೆಡ್ಡಿ ತಿಳಿಸಿದ್ದಾರೆ.
166 ಜೀವಗಳನ್ನು ಬಲಿಪಡೆದ ಮುಂಬೈ ಉಗ್ರದಾಳಿಯ ಹಿನ್ನೆಲೆಯಲ್ಲಿ 2009ರಲ್ಲಿ ಎನ್‌ಐಎಯನ್ನು ರಚಿಸಲಾಯಿತು. ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ನ್ಯಾಯಾಲಯಗಳು ಈಗಾಗಲೇ ಪ್ರಕರಣಗಳಿಂದ ತುಂಬಿ ಹೋಗಿವೆ ಮತ್ತು ಸರಕಾರ ಎನ್‌ಐಎ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮತ್ತಷ್ಟು ಪ್ರಕರಣಗಳನ್ನು ಸೇರಿಸುತ್ತಿದೆ ಎಂದು ತಿಳಿಸಿದ್ದಾರೆ.





