ವಿದ್ಯುತ್ ದರ ಏರಿಕೆ; ಮೆಸ್ಕಾಂನ ಹಗಲು ದರೋಡೆ: ಸುನಿಲ್ ಕುಮಾರ್ ಬಜಾಲ್

ಮಂಗಳೂರು, ಜು.9: ರಾಜ್ಯ ಸರಕಾರವು ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ದರವನ್ನು ವಿಪರೀತವಾಗಿ ಏರಿಸಿರುವುದರಿಂದ ಜನಸಾಮಾನ್ಯರು ಭಾರೀ ಸಂಕಷ್ಟ ಎದುರಿಸುವಂತಾಗಿದೆ.ಮೆಸ್ಕಾಂ ಜನರನ್ನು ಹಗಲು ದರೋಡೆ ನಡೆಸುತ್ತಿದೆ ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್‌ಕುಮಾರ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಉರ್ವಸ್ಟೋರಿನಲ್ಲಿ ಜರುಗಿದ 25ನೇ ದೇರೆಬೈಲ್ ಪಶ್ಚಿಮ ವಾರ್ಡ್ ಮಟ್ಟದ ಸಿಪಿಎಂ ಕಾರ್ಯಕರ್ತರ ಹಾಗೂ ಹಿತೈಷಿಗಳ ಸಮಾವೇಶ ವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕಳೆದ ಹಲವು ವರ್ಷಗಳ ಹಿಂದೆ ರಾಜ್ಯ ಸರಕಾರವು ವಿದ್ಯುತ್ ದರವನ್ನು ಏರಿಸುವಾಗ ಜನತೆಗೆ ಬಹಿರಂಗವಾಗಿ ತಿಳಿಸುತ್ತಿತ್ತು. ಆದರೆ ಇತ್ತೀಚೆಗೆ ವರ್ಷಕ್ಕೆ ಎರಡು ಬಾರಿ ವಿದ್ಯುತ್ ದರವನ್ನು ವಿಪರೀತವಾಗಿ ಏರಿಸಿದೆ. ಹೆಚ್ಚುವರಿ ಡಿಪಾಸಿಟ್ ಸಂಗ್ರಹ ಹಾಗೂ ತಪ್ಪು ಲೆಕ್ಕಾಚಾರಗಳ ಮೂಲಕ ಮೆಸ್ಕಾಂ ಹಗಲು ದರೋಡೆ ನಡೆಸುತ್ತಿದೆ. ಮೆಸ್ಕಾಂ ಹಾಗೂ ರಾಜ್ಯ ಸರಕಾರದ ವಿರುದ್ಧ ಪ್ರಬಲ ಹೋರಾಟ ನಡೆಸಬೇಕು ಎಂದು ಸುನಿಲ್ ಕುಮಾರ್ ಬಜಾಲ್ ಕರೆ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟಿಗಟ್ಟಲೇ ಹಣವನ್ನು ಅವ್ಯವಹಾರ ನಡೆಸಿದ್ದಾರೆಯೇ ಹೊರತು ಎಲ್ಲಿಯೂ ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ನಗರದ ಹೃದಯ ಭಾಗದಲ್ಲೇ ಒಳಚರಂಡಿ ವ್ಯವಸ್ಥೆಯು ಅವ್ಯವಸ್ಥೆಗಳ ಆಗರವಾಗಿದೆ. ಮಳೆಗಾಲ ಪ್ರಾರಂಭಗೊಂಡರೂ ನಗರದ ಹಲವೆಡೆ ಇನ್ನೂ ಕುಡಿಯಲು ನೀರಿಲ್ಲ. ಮಳೆನೀರು ಹರಿದಾಡಲು ರಸ್ತೆಯ ಪಕ್ಕದಲ್ಲಿ ಚರಂಡಿಗಳ ವ್ಯವಸ್ಥೆಗಳಿಲ್ಲದೆ ನೀರು ರಸ್ತೆಗಳಲ್ಲೇ ಹರಿದಾಡುತ್ತಿದೆ. ಒಟ್ಟಿನಲ್ಲಿ ಇಡೀ ನಗರದ ಅಭಿವೃದ್ಧಿಗೆ ತೊಡಕಾಗಿರುವುದು ನಗರಪಾಲಿಕೆ ಕಚೇರಿಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವೇ ಮೂಲಕಾರಣ ಎಂದು ಸುನಿಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ.
ಮುಖ್ಯ ಅತಿಥಿಯಾಗಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಭಾಗವಹಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಿಪಿಎಂ ಯುವನಾಯಕ ಮನೋಜ್ ಉರ್ವಸ್ಟೋರ್ ವಹಿಸಿದ್ದರು. ವೇದಿಕೆಯಲ್ಲಿ ಸಿಪಿಎಂ ಮುಖಂಡರಾದ ಪ್ರದೀಪ್, ಕಿಶೋರ್, ಪ್ರಶಾಂತ್ ಎಂ.ಬಿ., ಗಂಗಾಧರ್, ಇಕ್ಬಾಲ್ ಮುಂತಾದವರು ಉಪಸ್ಥಿತರಿದ್ದರು.









