ಜೆಪಿ ಮನೆ ಖರೀದಿದಾರರ ಸಮಸ್ಯೆ: ಸಮಾನ ಪ್ರಸ್ತಾವ ರೂಪಿಸುವಂತೆ ಕೇಂದ್ರಕ್ಕೆ ಸುಪ್ರಿಂ ಸೂಚನೆ

ಹೊಸದಿಲ್ಲಿ, ಜು.9: ರಿಯಲ್ ಎಸ್ಟೇಟ್ ಬಿಲ್ಡರ್‌ಗಳಿಗೆ ಬೃಹತ್ ಮೊತ್ತಗಳನ್ನು ಪಾವತಿ ಮಾಡಿದ್ದರೂ ಇನ್ನೂ ತಮ್ಮ ಮನೆಗಳನ್ನು ಪಡೆಯದ ಲಕ್ಷಾಂತರ ಮನೆ ಖರೀದಿದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸಮಾನ ಪ್ರಸ್ತಾವವನ್ನು ರಚಿಸುವಂತೆ ಕೇಂದ್ರ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.
ಜೆಪಿ ಇನ್‌ಫ್ರಾಸ್ಟ್ರಕ್ಚರ್ ಲಿ. ಗೆ ಸಂಬಂಧಿಸಿದ ಮನೆ ಖರೀದಿದಾರರ ಸಮಸ್ಯೆಗಳನ್ನು ಆಲಿಸಿದ ಶ್ರೇಷ್ಠ ನ್ಯಾಯಾಲಯ, ಈ ಸಮಸ್ಯೆ ಲಕ್ಷಾಂತರ ಮನೆ ಖರೀದಿದಾರರಿಗೆ ಸಂಬಂಧಿಸಿದ್ದಾಗಿದೆ ಹಾಗಾಗಿ ಇದನ್ನು ಬಗೆಹರಿಸಲು ಕೇಂದ್ರ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಬೇಕು ಎಂದು ತಿಳಿಸಿದೆ. ಈ ವಿಷಯದಲ್ಲಿ ಐಬಿಸಿ (ದಿವಾಳಿತನ ಸೂಚ್ಯ) ವ್ಯಾಪ್ತಿಯಲ್ಲಿ ನಾವೇನು ಮಾಡಲೂ ಸಾಧ್ಯವಿಲ್ಲ. ಆದರೆ ಅದರ ಹೊರಗೆ ನೀವು ಏನಾದರೂ ಸಲಹೆಯನ್ನು ನೀಡಬಹುದು. ಅದನ್ನು ನಾವು ಪರಿಗಣಿಸುತ್ತೇವೆ ಎಂದು ನ್ಯಾಯಾಧೀಶರಾದ ಎ.ಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರ ಪೀಠ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ಅವರಿಗೆ ತಿಳಿಸಿದೆ.
ಸಾವಿರಾರು ಮನೆ ಖರೀದಿದಾರರಿಗೆ ಸರಿಪಡಿಸಲಾಗದ ನಷ್ಟವನ್ನುಂಟು ಮಾಡುವ ಕಾರಣ ಜೆಪಿ ಇನ್‌ಫ್ರಾಸ್ಟ್ರಕ್ಚರ್ ಲಿ. ವಿರುದ್ಧದ ದಿವಾಳಿತನ ನಿರ್ಣಯ ಪ್ರಕ್ರಿಯೆಯ ಅವಧಿ ಮುಗಿದಿದ್ದರೂ ಅದರ ಆಸ್ತಿಯನ್ನು ಮಾರಾಟ ನಡೆಸಬಾರದು ಎಂದು ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆ ನಡೆಸುವ ವೇಳೆ ನ್ಯಾಯ ಪೀಠ ಈ ಹೇಳಿಕೆಯನ್ನು ನೀಡಿದೆ. ಜೆಪಿ ಇನ್‌ಫ್ರಾಸ್ಟ್ರಕ್ಚರ್ ಲಿ. ವಿರುದ್ಧ ಕಳೆದ ವರ್ಷ ಆಗಸ್ಟ್ 9ರಂದು ನಿರ್ಣಯ ಪ್ರಕ್ರಿಯೆಯನ್ನು ಪುನರ್‌ಆರಂಭಿಸಲು ಆದೇಶ ನೀಡಿದ್ದ ಸರ್ವೋಚ್ಚ ನ್ಯಾಯಾಲಯ, ಜೆಐಎಲ್, ಅದರ ಅಂಗ ಸಂಸ್ಥೆಗಳು ಮತ್ತು ಮಾಲಕರು ಇತರ ಹೊಸ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ನಿಷೇಧಿಸಿತ್ತು. ಜೆಐಎಲ್ ಅಂಗ ಸಂಸ್ಥೆ ಜೈಪ್ರಕಾಶ್ ಅಸೋಸಿಯೇಟ್ಸ್ ಲಿ. ವಿರುದ್ಧ ದಿವಾಳಿತನ ನಿರ್ಣಯ ಪ್ರಕ್ರಿಯೆ ಆರಂಭಿಸುವಂತೆ ರಿಸರ್ವ್ ಬ್ಯಾಂಕ್‌ಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.







