ವಿಧಾನ ಮಂಡಲ ಅಧಿವೇಶನದಲ್ಲೇ ಮೈತ್ರಿ ಬಲ ಪ್ರದರ್ಶನ ಸಾಧ್ಯತೆ
ಮುಂದುವರೆದ ಅತೃಪ್ತ ಶಾಸಕರ ರಾಜೀನಾಮೆ ಸರಣಿ

ಬೆಂಗಳೂರು, ಜು. 9: ಅತೃಪ್ತ ಶಾಸಕರ ರಾಜೀನಾಮೆ ಸರಣಿ ಮುಂದುವರಿದಿದ್ದು, ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಭವಿಷ್ಯ ಅಡಕತ್ತರಿಯಲ್ಲಿದೆ. ಈ ಮಧ್ಯೆ ಜು.12ರಿಂದ ವಿಧಾನ ಮಂಡಲ ಅಧಿವೇಶನ ಆರಂಭಗೊಳ್ಳಲಿದ್ದು ಅಲ್ಲೆ ರಾಜಕೀಯ ಪಕ್ಷಗಳ ಬಲಾಬಲ ಸಾಬೀತಾಗುವ ಸಾಧ್ಯತೆಗಳಿವೆ.
ಹೀಗಾಗಿಯೇ ಮುಖ್ಯಮಂತ್ರಿ ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಮೈತ್ರಿ ಪಕ್ಷಗಳ ಮುಖಂಡರು ನಿರಾಳರಾಗಿರುವಂತೆ ಕಂಡುಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸ್ಪೀಕರ್ ರಮೇಶ್‌ಕುಮಾರ್ ಅವರೂ ಜು.12ರಿಂದ ಅಧಿವೇಶನ ಆರಂಭಗೊಳ್ಳಲಿದ್ದು ಅದರ ಪಾಡಿಗೆ ಅದು ನಡೆಯಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
224 ಸದಸ್ಯ ಬಲದ ವಿಧಾನಸಭೆ ಇದೀಗ 14 ಮಂದಿ ಶಾಸಕರ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ವಿಧಾನಸಭೆ ಸಂಖ್ಯಾಬಲ 210ಕ್ಕೆ ಕುಸಿದಿದೆ. ಕಾಂಗ್ರೆಸ್-67, ಜೆಡಿಎಸ್-34, ಬಿಎಸ್ಪಿ-1 ಹಾಗೂ ಸ್ಪೀಕರ್-1 ಸೇರಿ ಮೈತ್ರಿ ಬಲ 103ಕ್ಕೆ ಕುಸಿದಿದೆ. ವಿಪಕ್ಷ ಬಿಜೆಪಿ-105 ಮತ್ತು ಇಬ್ಬರು ಪಕ್ಷೇತರರು ಸೇರಿ 107ಕ್ಕೆ ಏರಿದೆ.
ಸಂಖ್ಯಾಬಲವಿಲ್ಲದ ಕಾರಣ ಮೈತ್ರಿ ಸರಕಾರ ಅಧಿಕಾರದಿಂದ ಕೆಳಗಿಳಿಯಲಿದೆ ಎಂದು ರಾಜಕೀಯ, ಸಾರ್ವಜನಿಕ ವಲಯದಲ್ಲಿ ವಿಶ್ಲೇಷಣೆಗಳು ನಡೆಯುತ್ತಿವೆ. ಆದರೆ, ಸರಕಾರ ಸರಳ ರೀತಿಯಲ್ಲಿ ಬೀಳಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳು ಮೈತ್ರಿ ವಲಯದಿಂದ ಕೇಳಿಬರುತ್ತಿವೆ.
ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯ ಅಸ್ತ್ರ ಪ್ರಯೋಗಕ್ಕೆ ಮೈತ್ರಿ ಪಕ್ಷಗಳ ಮುಖಂಡರು ನಿರ್ಧರಿಸಿದ್ದಾರೆ. ಇದರಿಂದ ಶಾಸಕರ ರಾಜಕೀಯ ಭವಿಷ್ಯವೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಅತೃಪ್ತರು ಪಟ್ಟು ಸಡಿಲಿಸಲಿದ್ದಾರೆಂಬ ನಿರೀಕ್ಷೆಯಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಸಹಜವಾಗಿಯೇ ಆಯಾ ರಾಜಕೀಯ ಪಕ್ಷಗಳು ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡುತ್ತವೆ. ಒಂದು ವೇಳೆ ಶಾಸಕರು ವಿಧಾನ ಮಂಡಲ ಅಧಿವೇಶನಕ್ಕೆ ಗೈರು ಹಾಜರಾದರೆ ವಿಪ್ ಉಲ್ಲಂಘನೆ ನೆಪದಲ್ಲಿ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೊತ್ತಾಗಿದೆ.
ಏತನ್ಮಧ್ಯೆ ವಿಪಕ್ಷ ಬಿಜೆಪಿ, ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಅಥವಾ ರಾಜ್ಯಪಾಲರಿಗೆ ದೂರು ನೀಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಆದರೆ ರಾಜ್ಯ ರಾಜಕೀಯದ ಹಾವು-ಏಣಿ ಆಟದಂತೆ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ವಿಧಾನ ಮಂಡಲ ಅಧಿವೇಶನದತ್ತ ಎಲ್ಲರ ಚಿತ್ತ ನೆಟ್ಟಿದೆ.







