‘ಜನಾದೇಶವಿಲ್ಲದೇ ಅಧಿಕಾರದ ಕುರ್ಚಿಗೆ ಅಂಟಿಕೊಂಡ ಸಿಎಂ’

ಉಡುಪಿ, ಜು.9: ಜನಾದೇಶವಿಲ್ಲದೇ ಹೋದರೂ ಅಧಿಕಾರದ ಆಸೆಗೆ ಕುರ್ಚಿಗೆ ಅಂಟಿಕೊಂಡು ಕುಳಿತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಜಾಪ್ರಭುತ್ವದ ಉಳಿವಿಗಾಗಿ ತಕ್ಷಣ ಮುಖ್ಯಮಂತ್ರಿ ಸ್ಥಾನದಿಂದ ಇಳಿಯಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ರಾಜ್ಯ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಬಹುಮತ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕಡಿಯಾಳಿಯಲ್ಲಿರುವ ಪಕ್ಷದ ಕಚೇರಿ ಮುಂಭಾಗ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು್ದೇಶಿಸಿ ಅವರು ಮಾತನಾಡುತಿದ್ದರು.
ಈ ಸಮ್ಮಿಶ್ರ ಸರಕಾರ ಎಷ್ಟು ಬೇಗ ತೊಲಗುತ್ತದೋ ಅಷ್ಟು ಜನರಿಗೆ ಅನುಕೂಲ ಎಂದು ಅವರು, ಸರಕಾರದಲ್ಲಿ ಸಿಎಂ ಸಹಿತ ಯಾರೊಬ್ಬರೂ ವಿಧಾನಸೌಧಕ್ಕೆ ತೆರಳಿ ಕೆಲಸ ಮಾಡುತ್ತಿಲ್ಲ. ಸರಕಾರದ ಉಳಿವಿಗಾಗಿ ಹೊಟೇಲ್ ನಲ್ಲೇ ಕಾಲ ಕಳೆಯುತಿದ್ದಾರೆ. ಆಡಳಿತ ಪಕ್ಷದ 12ಕ್ಕೂ ಅಧಿಕ ಶಾಸಕರು ಈಗಾಗಲೇ ರಾಜಿನಾಮೆ ನೀಡಿದ್ದು, ಕಾಂಗ್ರೆಸ್ ಒತ್ತಡಕ್ಕೆ ಮಣಿದು ಸ್ಪೀಕರ್ ಅದನ್ನು ಸ್ವೀಕರಿಸುತ್ತಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಹೀಗಾಗಿ ಪ್ರಜಾಪ್ರಭುತ್ವದ ಉಳಿವಿೆ ಸಿಎಂ ರಾಜೀನಾಮೆ ಅಗತ್ಯ ಎಂದರು.
ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿ, ಇಂತಹ ನಾಚಿಕೆಗೆಟ್ಟಿರುವ ಸಿಎಂನ್ನು ನಾವು ಇದುವರೆಗೆ ಕಂಡಿಲ್ಲ. ರಾಜ್ಯವನ್ನು ಗಡಿಯಿಲ್ಲದ ಹೊಲದಂತೆ ಮೇಯುತ್ತಿದ್ದು, ಸ್ವಇಚ್ಛೆಯಿಂದ ಇಳಿಯದೇ ಹೋದರೆ ಬಲವಂತವಾಗಿ ಕೆಳಗೆ ಎಳೆದು ಹಾಕಬೇಕೆಂದರು.
ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿ ಹೆರ್ಗ, ಯಶ್‌ಪಾಲ್ ಸುವರ್ಣ, ಕುಯಿಲಾಡಿ ಸುರೇಶ್ ನಾಯಕ್, ಕಪ್ಪೆಟ್ಟು ಪ್ರವೀಣ್ ಶೆಟ್ಟಿ, ಗಿರೀಶ್ ಅಂಚನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಸಂಧ್ಯಾ ರಮೇಶ್, ವೀಣಾ ಶೆಟ್ಟಿ, ಶ್ರೀಶ ನಾಯಕ್ ಪೆರ್ಣಂಕಿಲ, ಬಾಲಕೃಷ್ಣ ಶೆಟ್ಟಿ, ರಶ್ಮಿತಾ ಬಾಲಕೃಷ್ಣ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.








