ದಾಖಲೆ ರಹಿತ ಆಟೊರಿಕ್ಷಾ ಸಂಗ್ರಹ: ಆರೋಪಿ ಸೆರೆ

ಮಂಗಳೂರು, ಜು.9: ಸೂರಲ್ಪಾಡಿಯಲ್ಲಿ ದಾಖಲೆ ರಹಿತವಾಗಿ ತಂದಿರಿಸಿದ್ದ 18 ಆಟೋರಿಕ್ಷಾಗಳ ಸಹಿತ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ತಾಲೂಕಿನ ಉಳಾಯಿಬೆಟ್ಟು ನಿವಾಸಿ ಇರ್ಫಾನ್ (28) ಬಂಧಿತ ಆರೋಪಿ.
ಬಡಗುಳಿಪ್ಪಾಡಿ ಗ್ರಾಮದ ಸೂರಲ್ಪಾಡಿ ಎಂಬಲ್ಲಿ ಕಾಂಪ್ಲೆಕ್ಸ್ ವೊಂದರ ಸಮೀಪದ ಗುಜರಿ ಅಂಗಡಿ ಮತ್ತು ಅದಕ್ಕೆ ತಾಗಿದ ಜಾಗದಲ್ಲಿ ಯಾವುದೇ ದಾಖಲಾತಿಗಳಿಲ್ಲದ ಆಟೋರಿಕ್ಷಾಗಳನ್ನು ಕಳವು ಮಾಡಿ ತಂದಿರಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸ್ ನಿರೀಕ್ಷಕ ಎಸ್. ಪರಶಿವಮೂರ್ತಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಗುಜರಿ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿದಾಗ ಹಲವು ಆಟೋರಿಕ್ಷಾಗಳನ್ನು ಇರಿಸಿರುವುದು ಕಂಡುಬಂದಿದೆ. ಗುಜರಿ ಅಂಗಡಿಯಲ್ಲಿದ್ದ ಇರ್ಫಾನ್‌ನನ್ನು ವಿಚಾರಿಸಿದಾಗ ಸಮಂಜಸ ಉತ್ತರ ನೀಡಿಲ್ಲ. ದಾಖಲಾತಿಯ ಬಗ್ಗೆ ವಿಚಾರಿಸಿದಾಗ ಯಾವುದೇ ಮಾಹಿತಿ ನೀಡಿಲ್ಲ. ಆಟೋರಿಕ್ಷಾಗಳನ್ನು ಇನ್ನೋರ್ವ ಆರೋಪಿ ತಂದಿರಿಸಿದ್ದು, ಇಬ್ಬರೂ ಸೇರಿ ಮಾರಾಟ ಮಾಡುವ ಉದ್ದೇಶದಿಂದ ಇರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಜರಿ ಅಂಗಡಿಯಲ್ಲಿದ್ದ ಒಟ್ಟು 18 ಆಟೋರಿಕ್ಷಾಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಆಟೋರಿಕ್ಷಾಗಳ ಒಟ್ಟು ಮೌಲ್ಯ 3.70 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.







