ಮಂಗಳೂರು ವಿಮಾನ ನಿಲ್ದಾಣಕ್ಕೆ ಅಕ್ರಮ ಪ್ರವೇಶ: ಆರೋಪಿ ಸೆರೆ

ಮಂಗಳೂರು, ಜು. 9: ರದ್ದುಪಡಿಸಿದ ಪ್ರಯಾಣದ ಟಿಕೆಟ್ ಉಪಯೋಗಿಸಿ ವಿಮಾನ ನಿಲ್ದಾಣದೊಳಗೆ ಅಕ್ರಮವಾಗಿ ಪ್ರವೇಶಿಸಿದ ಕೂಳೂರು ನಿವಾಸಿ ಕೆವಿನ್ ವೆರ್ನನ್ ಫೆರ್ನಾಂಡಿಸ್ ಎಂಬಾತನನ್ನು ಸಿಐಎಸ್‌ಎಫ್ ಸಿಬ್ಬಂದಿ ವಶಕ್ಕೆ ಪಡೆದು ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಕೆವಿನ್ ಡಿಪಾರ್ಚರ್ ಲಾಂಜ್‌ಗೆ ಪಾಸ್‌ಪೋರ್ಟ್ ಹಾಗೂ ರದ್ದು ಮಾಡಿದ ಟಿಕೆಟ್ ಪಡೆದು ಒಳ ಪ್ರವೇಶಿಸಿದ್ದ. ಇ-ಟಿಕೆಟ್ ಪರಿಶೀಲನೆ ನಡೆಸಿದಾಗ ದುಬೈಗೆ ಹೋಗುವ 8:15ಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ್ದಾಗಿತ್ತು. ಸಂಜೆ 6:10ಕ್ಕೆ ಎಕ್ಸಿಟ್ ಗೇಟ್ ಮೂಲಕ ಕೆವಿನ್ ವಿಮಾನ ನಿಲ್ದಾಣಕ್ಕೆ ಒಳ ಪ್ರವೇಶಿಸುತ್ತಿದ್ದಾಗ ಸಿಐಎಸ್‌ಎಫ್ ಸಿಬ್ಬಂದಿ ತಡೆದಿದ್ದಾರೆ. ಈ ಸಂದರ್ಭ ದಾಖಲೆ ಪರಿಶೀಲನೆ ನಡೆಸಿದಾಗ ಪತ್ನಿಯೊಂದಿಗೆ ದುಬೈಗೆ ಪ್ರಯಾಣಿಸಲು ಟಿಕೆಟ್ ಪಡೆದು ಬಳಿಕ ರದ್ದು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಪತ್ನಿಯನ್ನು ಕಳುಹಿಸಿ ಕೊಡಲು ರದ್ದು ಮಾಡಿದ ಟಿಕೆಟ್ ತೋರಿಸಿ ಒಳ ಪ್ರವೇಶಿಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಅಕ್ರಮ ಪ್ರವೇಶ ಮಾಡಿರುವ ವಿರುದ್ಧ ಪ್ರಕರಣ ದಾಖಲಾಗಿದೆ.





