ಕರ್ತವ್ಯಲೋಪ: ಸುರತ್ಕಲ್ ಇನ್‌ಸ್ಪೆಕ್ಟರ್ ಅಮಾನತು

ಮಂಗಳೂರು, ಜು.9: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ವಿರುದ್ಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲು ವಿಫಲವಾಗಿದ್ದಲ್ಲದೆ, ಠಾಣೆಯಲ್ಲಿ ಕರ್ತವ್ಯ ಲೋಪವೆಸಗಿದ ಆರೋಪದಡಿ ಸುರತ್ಕಲ್ ಇನ್‌ಸ್ಪೆಕ್ಟರ್ ರಾಮಕೃಷ್ಣ ಅವರನ್ನು ಅಮಾನತುಪಡಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗಾಂಜಾ, ದನ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರು ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದರು.
ಆದರೆ ಸುರತ್ಕಲ್ ಠಾಣಾ ಇನ್‌ಸ್ಪೆಕ್ಟರ್ ಗಂಭೀರವಾಗಿ ಪರಿಗಣಿಸದೆ ಕರ್ತವ್ಯಲೋಪವೆಸಗಿದ್ದರು ಎಂಬ ಆರೋಪವಿದೆ. ಇದು ಮಾತ್ರವಲ್ಲದೆ, ಹಣಕಾಸು ಸಂಸ್ಥೆಯೊಂದು ವಂಚನೆ ಮಾಡಿದ ಆರೋಪದಲ್ಲಿ ಸಾರ್ವಜನಿಕರು ಠಾಣೆಗೆ ದೂರು ನೀಡಲು ಬಂದಾಗ ಕೇಸು ದಾಖಲಿಸದೆ ಹಿಂದೆ ಕಳುಹಿಸಿದ್ದರು. ಇದು ಕಮಿಷನರ್ ಅವರ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.





