ರಾಜ್ಯದ ರಾಜಕೀಯ ಆರಾಜಕತೆಗೆ ಬಿಜೆಪಿ ಕಾರಣ: ಡಾ.ವಿಜಯಕುಮಾರ್ ಆರೋಪ
ಬಿಜೆಪಿ ವಿರುದ್ಧ ಚಿಕ್ಕಮಗಳೂರು ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು, ಜು.9: ಕರ್ನಾಟಕ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರಕಾರವನ್ನು ಅಭದ್ರಗೊಳಿಸುವ ಮೂಲಕ ರಾಜ್ಯದಲ್ಲಿ ರಾಜಕೀಯ ಅಭದ್ರತೆಯನ್ನು ಬಿಜೆಪಿ ಪಕ್ಷ ಉಂಟು ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಡಿಎಲ್ ವಿಜಯಕುಮಾರ್ ಆರೋಪಿಸಿದರು.
ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಅದೇಕೊ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರಂತೆ ವರ್ತಿಸುತ್ತಿದೆ. ಈಗಾಗಲೇ ಕೇಂದ್ರದಲ್ಲಿ ಸರಕಾರ ರಚಿಸಲು ಬಿಜೆಪಿಗೆ ನಿರೀಕ್ಷೆಗೂ ಮೀರಿದ ಬಹುಮತ ಸಿಕ್ಕಿದೆ. ಆದರೆ ಈ ಪಕ್ಷದವರು ಬೇರೆ ಬೇರೆ ಪಕ್ಷಗಳ ಸಂಸದರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ವಿರೋಧ ಪಕ್ಷಗಳೇ ಇರಬಾರದೆಂಬಂತೆ ಮಾಡಬೇಕೆಂದು ತೀರ್ಮಾನ ತೆಗೆದುಕೊಂಡಿದ್ದು, ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ರಾಜ್ಯದ ಕೆಲ ಶಾಸಕರನ್ನು ಮುಂಬೈಯಲ್ಲಿ ಬಂಧನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮೋದಿ, ಅಮಿತ್ ಶಾ ಷಡ್ಯಂತ್ರ ಮಾಡುತ್ತಿದ್ದಾರೆಂದು ಆರೋಪಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಕೆಲವು ವಿಚಾರಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಮೇಲೆ ಬೇಸರಗೊಂಡು ರಾಜೀನಾಮೆ ನೀಡಿದ್ದಾರೆ. ಇದು ಸರಿಯಲ್ಲ. ಮತದಾರರು 5 ವರ್ಷಕ್ಕೆ ಅಧಿಕಾರ ನೀಡಿದ್ದಾರೆ. ಅದನ್ನು ಕಳೆದುಕೊಳ್ಳುವ ಮೂಲಕ ಜನರಿಗೆ ವಂಚನೆ ಮಾಡಬಾರದು. ಈಗಲೂ ಕಾಲ ಮೀರಿಲ್ಲ, ರಾಜಿನಾಮೆ ನೀಡಿರುವ ಎಲ್ಲಾ ಶಾಸಕರು ತಮ್ಮ ನಿಲುವು ಬದಲಿಸಬೇಕೆಂದು ಮನವಿ ಮಾಡಿದರು.
ಕೆಪಿಸಿಸಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಂ.ಎಲ್ ಮೂರ್ತಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಚಿಹ್ನೆಯಲ್ಲಿ ಗೆದ್ದು ಪಕ್ಷಕ್ಕೆ ದ್ರೋಹ ಮಾಡುವುದಲ್ಲದೇ ಮತದಾರರಿಗೆ ಅಪಮಾನ ಮಾಡಿರುವ ಶಾಸಕರ ಕ್ರಮ ಖಂಡನೀಯ. ಶಾಸಕರ ಅಸಮಾದಾನದ ಹಿಂದೆ ಬಿಜೆಪಿ ಅಧಿಕಾರ ಲಾಲಾಸೆಯ ಹುನ್ನಾರ ಅಡಗಿದೆ. ಹೊಟ್ಟೆ ತುಂಬಿರುವ ಬಿಜೆಪಿ ಇನ್ನೂ ತುಂಬಿಸಿಕೊಳ್ಳುವ ಮೂಲಕ ಹೊಟ್ಟೆ ಬಿರಿಸಿಕೊಂಡು ಒಂದಲ್ಲ ಒಂದು ದಿನ ರೋಗಕ್ಕೆ ತುತ್ತಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಜನ ಎಲ್ಲರನ್ನು ಗಮನಿಸುತ್ತಿದ್ದಾರೆ. ಜನವಿರೋಧಿಯಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆಯವವವರನ್ನು ಜನ ಸಹಿಸಲಾರರು, ಕಾಂಗ್ರೆಸ್ ಪಕ್ಷದ ಕರೆ ನಮ್ಮ ಜವಾಬ್ದಾರಿ. ಮುಂದೆ ಕೂಡ ನಾವು ಹೋರಾಟ ಮುಂದುವರಿಸುತ್ತೇವೆ. ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ ಶಿವಾನಂದಸ್ವಾಮಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ತಾಲೂಕು ಕಚೇರಿ ಆವರಣದಿಂದ ಹೊರಟು ಬಂದ ಮೆರವಣಿಗೆಯ ನೇತೃತ್ವವನ್ನು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ರೇಖಾ ಹುಲಿಯಪ್ಪಗೌಡ, ಜಿಲ್ಲಾ ಪರಿಷತ್ ಸದಸ್ಯೆ ಪ್ರೇಮಾ ಮಂಜುನಾಥ್, ಎಪಿಎಂಸಿ ಅಧ್ಯಕ್ಷ ಪ್ರಕಾಶ್, ಪಕ್ಷದ ವಿವಿಧ ಮುಂಚೂಣಿ ಘಟಕಗಳ ಮುಖಂಡರಾದ ಶಿವಕುಮಾರ್, ನಿಸಾರ್ ಅಹಮ್ಮದ್, ರಸೂಲ್ ಖಾನ್, ಸಿಲ್ವಸ್ಟರ್, ಪವನ್, ವಕ್ಫ್ ಮಂಡಳಿ ಅಧ್ಯಕ್ಷ ಅತೀಕ್ ಖೈಸರ್, ಮಾಜಿ ನಗರಸಭೆ ಸದಸ್ಯರಾದ ಎಚ್.ಎಸ್ ಪುಟ್ಟಸ್ವಾಮಿ, ರೂಬೆನ್ ಮೊಸಸ್, ಸುರೇಖಾ ಸಂಪತ್ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.







