ಕೃಷಿ ಭೂಮಿಯಲ್ಲಿ ಪವರ್ ಪ್ಲಾಂಟ್ ಸ್ಥಾಪನೆ: ಜಿಲ್ಲಾಧಿಕಾರಿ ಸೇರಿ ನಾಲ್ವರಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಜು.9: ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಲೇಪೇಟೆಯಲ್ಲಿ ಕಾನೂನನ್ನು ಉಲ್ಲಂಘಿಸಿ ಕೃಷಿ ಭೂಮಿಯಲ್ಲಿ ಸೋಲಾರ್ ಪವರ್ ಪ್ಲಾಂಟ್ ಸ್ಥಾಪಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಕಲಬುರಗಿ ಜಿಲ್ಲಾಧಿಕಾರಿ ಸೇರಿ ನಾಲ್ವರು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ಯಾದಗಿರಿ ನಿವಾಸಿ ವಿಶ್ವನಾಥ್ ಅವಂತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲ ಕೃಷ್ಣಕುಮಾರ್ ಅವರು, ರೀನ್ಯೂ ಸೋಲಾರ್ ಪವರ್ ಪ್ರೈ. ಲಿ. ದಿ ರೀನ್ಯೂ ವಿಂಗ್ ಎನರ್ಜಿ ಪೋರ್ ಪ್ರೈ.ಲಿಮಿಟೆಡ್‌ನವರಿಗೆ ಸಂವಿಧಾನದ ಕಲಂ 226 ಮತ್ತು 227ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ಉಲ್ಲಂಘಿಸಿ 24 ಎಕರೆ 14 ಗುಂಟೆ ಕೃಷಿ ಜಮೀನನ್ನು ಸರಕಾರ ನೀಡುತ್ತಿದ್ದರೂ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿ, ಚಿಂಚೋಳಿ ತಾಲೂಕಿನ ತಹಶೀಲ್ದಾರ್ ಅವರು ಇದಕ್ಕೆ ತಡೆಯೊಡ್ಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಕಲಬುರಗಿ ಜಿಲ್ಲಾಧಿಕಾರಿ ಸೇರಿ ನಾಲ್ವರು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಈ ಕುರಿತು ಆಕ್ಷೇಪಣೆ ಸಲ್ಲಿಸಲು ಆದೇಶಿಸಿತು.





