ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಮಂಡ್ಯದಲ್ಲಿ ಶಿಕ್ಷಕರ ಪ್ರತಿಭಟನೆ

ಮಂಡ್ಯ, ಜು.9: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಮೆರವಣಿಗೆ ನಡೆಸಿದ ಅವರು, ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ತಾಕೀತು ಮಾಡಿದರು.
2014ಕ್ಕಿಂತ ಮೊದಲು ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1 ರಿಂದ 5ನೇ ವರ್ಗಕ್ಕೆ ಸೀಮಿತಗೊಳಿಸಿರುವ ಆದೇಶವನ್ನು ರದ್ದುಗೊಳಿಸಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.
ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಯೋಜನೆಯನ್ನು ಮುಂದುವರಿಸಬೇಕು. ಮೂರು ವರ್ಷದಿಂದ ವರ್ಗಾವಣೆ ಆಗದಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರ ಅಕ್ಟೋಬರ್ ತಿಂಗಳಲ್ಲಿ ಮತ್ತೊಮ್ಮೆ ಕೇವಲ ಕೋರಿಕೆ ವರ್ಗಾವಣೆ ಮಾಡಬೇಕು. ಎಲ್ಲಾ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಆರಂಭಿಸಬೇಕು.
ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು. 6ನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸ್ಸಿನ ಪ್ರಕಾರ ಮುಖ್ಯ ಗುರುಗಳಿಗೆ 10, 15, 20, 25, 30 ವರ್ಷದ ಭಡ್ತಿ ನೀಡಬೇಕು. ಗ್ರಾಮೀಣ ಶಿಕ್ಷಕರ, ನೌಕರರ ಸಮಸ್ಯೆ ನಿವಾರಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಟಿ.ರವಿಶಂಕರ್, ಪ್ರಧಾನ ಕಾರ್ಯದರ್ಶಿ ಜೆ.ವೈ.ಮಂಜುನಾಥ, ಕೆ.ಯುವರಾಜ, ಕೆ.ನಾಗೇಶ್, ದೇವರಾಜು, ಪದಾಧಿಕಾರಿಗಳು ಪ್ರತಿಭಟನೆ ನೇತೃತ್ವ ವಹಿಸಿದ್ದರು.







