ಭಾರತದ ವಿರುದ್ಧ ಅಮೆರಿಕದ ವಾಣಿಜ್ಯ ಸಮರ ಆರಂಭ: ವಿಶ್ಲೇಷಕರ ಅಭಿಪ್ರಾಯ

ವಾಶಿಂಗ್ಟನ್, ಜು. 9: ಆಮದು ತೆರಿಗೆ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮತ್ತೊಮ್ಮೆ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ. ಈ ವಿಷಯದಲ್ಲಿ ಭಾರತವು ತುಂಬಾ ಹಿಂದಿನಿಂದಲೂ ಪ್ರಯೋಜನಗಳನ್ನು ಪಡೆಯುತ್ತಾ ಬಂದಿದೆ ಎಂಬುದಾಗಿ ಟ್ವೀಟ್ ಮಾಡಿರುವ ಅವರು, ಆದರೆ ಇನ್ನು ಅದು ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ಇದು ಭಾರತದ ವಿರುದ್ಧದ ಅಮೆರಿಕದ ವಾಣಿಜ್ಯ ಸಮರದ ಆರಂಭ ಎಂಬುದಾಗಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಅಮೆರಿಕಗಳು ತಮ್ಮ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳನ್ನು ಪುನರಾರಂಭಿಸುವ ಮುನ್ನ ಟ್ರಂಪ್ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ. ಅಮೆರಿಕದ ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾತುಕತೆಗಾಗಿ ಮುಂದಿನ ವಾರ ಹೊಸದಿಲ್ಲಿಗೆ ಪ್ರಯಾಣಿಸಲಿದ್ದಾರೆ.
ಭಾರತವು ತಾನು ವಿಧಿಸಿರುವ ಪ್ರತೀಕಾರಾತ್ಮಕ ತೆರಿಗೆಗಳನ್ನು ಹಿಂದಕ್ಕೆ ಪಡೆಯಬೇಕು ಎಂಬುದಾಗಿ ಕಳೆದ ತಿಂಗಳು ಟ್ರಂಪ್ ಒತ್ತಾಯಿಸಿದ್ದರು. ಭಾರತ ವಿಧಿಸಿರುವ ತೆರಿಗೆಗಳು ‘ಅಸ್ವೀಕಾರಾರ್ಹ’ ಎಂಬ ಕಟು ಎಚ್ಚರಿಕೆಯನ್ನೂ ಅವರು ನೀಡಿದ್ದರು.
ಕೆಲವು ನಿರ್ದಿಷ್ಟ ಭಾರತೀಯ ವಸ್ತುಗಳಿಗೆ ಸುಂಕ ರಹಿತ ಪ್ರವೇಶವನ್ನು ಅಮೆರಿಕ ರದ್ದುಪಡಿಸಿದ ಬಳಿಕ, ಭಾರತವು ಜೂನ್ ತಿಂಗಳಲ್ಲಿ ಅಮೆರಿಕದ 28 ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ







