ಗಾಂಧಿ ಜನ್ಮದಿನೋತ್ಸವದಂದು 150 ಕಿ.ಮೀ. ಪಾದಯಾತ್ರೆ ಕೈಗೊಳ್ಳಲು ಬಿಜೆಪಿ ಸಂಸದರಿಗೆ ಮೋದಿ ಸೂಚನೆ

ಹೊಸದಿಲ್ಲಿ, ಜು.9: ಮಹಾತ್ಮಾ ಗಾಂಧಿ ಮತ್ತು ವಲ್ಲಭಬಾಯಿ ಪಟೇಲ್ ಅವರ ಜನ್ಮದಿನೋತ್ಸವದ ಪ್ರಯುಕ್ತ ತಮ್ಮ ಕ್ಷೇತ್ರಗಳಲ್ಲಿ ಅಕ್ಟೋಬರ್ 2ರಿಂದ 31ರ ಅವಧಿಯಲ್ಲಿ 150 ಕಿ.ಮೀ.ಪಾದಯಾತ್ರೆ ನಡೆಸುವಂತೆ ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಂಗಳವಾರ ತಿಳಿಸಿದ್ದಾರೆ.
ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಮೋದಿ, ಬಿಜೆಪಿ ಸಂಘಟನೆ ದುರ್ಬಲವಾಗಿರುವ ಕ್ಷೇತ್ರಗಳಿಗೆ ಭೇಟಿ ನೀಡುವಂತೆ ರಾಜ್ಯ ಸಭಾ ಸದಸ್ಯರಿಗೆ ಸೂಚಿಸಿದ್ದಾರೆ. ಪಾದಯಾತ್ರೆಯನ್ನು ಮಹಾತ್ಮಾ ಗಾಂಧಿ ಜನ್ಮದಿನದಂದು ಆರಂಭಿಸಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವಾದ ಅಕ್ಟೋಬರ್31ರ ವರೆಗೆ ನಡೆಸಬಹುದು ಎಂದು ಪ್ರಧಾನಿ ತನ್ನ ಪಕ್ಷದ ಸಂಸದರಿಗೆ ತಿಳಿಸಿದ್ದಾರೆ. ಆದರೆ ಈ ಪಾದಯಾತ್ರೆಯನ್ನು ಅಕ್ಟೋಬರ್ 2 ಮತ್ತು ಗಾಂಧಿ ಪುಣ್ಯತಿಥಿಯ ದಿನವಾದ ಜನವರಿ 30ರ ಅವಧಿಯ ಮಧ್ಯೆಯೂ ನಡೆಸಬಹುದಾಗಿದೆ.
ಸಮಯದ ಬಗ್ಗೆ ಪಕ್ಷವೇ ನಿರ್ಧರಿಸಲಿದೆ ಎಂದು ಅವರು ತಿಳಿಸಿದ್ದಾರೆ ಎಂದು ಜೋಶಿ ಮಾಹಿತಿ ನೀಡಿದ್ದಾರೆ. ಈ ಪಾದಯಾತ್ರೆಗಳಲ್ಲಿ ಗ್ರಾಮಗಳ ಮೇಲೆ ಒತ್ತು ನೀಡಬೇಕು ಮತ್ತು ಸಾರ್ವಜನಿಕರನ್ನು ತಲುಪುವಂತಿರಬೇಕು ಎಂದು ಪ್ರಧಾನಿ ತಿಳಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ಅರ್ಜುನ್ ರಾಮ್ ಮೆಗ್ವಲ್ ತಿಳಿಸಿದ್ದಾರೆ. ಸಸಿಗಳನ್ನು ನೆಡುವುದು, ಸ್ವಚ್ಛತೆ ಮತ್ತು ಗ್ರಾಮಗಳಿಗೆ ಸಂಬಂಧಿಸಿದ ಇತರ ವಿಷಯಗಳು ಈ ಪಾದಯಾತ್ರೆಯ ಭಾಗವಾಗಿರಬೇಕು ಎಂದು ಪ್ರಧಾನಿ ಸೂಚಿಸಿದ್ದಾರೆ ಎಂದು ಮೆಗ್ವಲ್ ತಿಳಿಸಿದ್ದಾರೆ.