ಜು.21ರ ಬೆಳಗಾವಿ ಸಮಾವೇಶಕ್ಕೆ ದ.ಕ.ದಿಂದ 80 ರೈತರು: ರವಿಕಿರಣ್
ಮಂಗಳೂರು, ಜು.10: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ 39ನೆ ಹೈತ ಹುತಾತ್ಮ ದಿನಾಚರಣೆ ಅಂಗವಾಗಿ ಬೆಳಗಾವಿಯಲ್ಲಿ ಜುಲೈ 21ರಂದು ನಡೆಯಲಿರುವ ರೈತರ ಸಮಾವೇಶದಲ್ಲಿ ದ.ಕ. ಜಿಲ್ಲೆಯ ಸುಮಾರು 80 ರೈತರು ಭಾಗವಹಿಸಲಿದ್ದಾರೆ ಎಂದು ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಬರಮುಕ್ತ ಕರ್ನಾಟಕ ನಿರ್ಮಾಣ ಸಂಕಲ್ಪದೊಂದಿಗೆ ನಡೆಯಲಿರುವ ಸಮಾವೇಶದಲ್ಲಿ ರಾಜ್ಯದ ಸಮ್ಮಿಶ್ರ ಸರಕಾರದ ವೈಫಲ್ಯ ಹಾಗೂ ವಿರೋಧ ಪಕ್ಷದ ದಿವಾಳಿತನವನ್ನು ಬಯಲಿಗೆಳೆಯಲಾಗುವುದು ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ವಿರೋಧಿ ನೀತಿಗಳನ್ನು ಕೂಡಾ ಸಮಾವೇಶ ಖಂಡಿಸಲಿದೆ. ಕರಾವಳಿ ಹಾಗೂ ಮಲೆನಾಡು ಪ್ರದೇಶವನ್ನು ಹೊಂದಿರುವ ದ.ಕ. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಬರಗಾಲದ ಪರಿಸ್ಥಿಯಿದೆ. ಈ ಬಾರಿ 2,000-2,600 ಹೆಕ್ಟೇರ್ ಅಡಿಕೆ ತೋಟ ನಾಶವಾಗಿದೆ. ಅಡಿಕೆ ಉತ್ಪಾದನೆಯಲ್ಲಿ ಶೇ.35ರಷ್ಟು ಕುಂಠಿತವಾಗಿದೆ. ಜಿಲ್ಲೆಯಲ್ಲಿ ಅರಣ್ಯ ಪ್ರದೇಶವೂ ಕಡಿಮೆಯಾಗುತ್ತಿದ್ದು, ಹಿಂಗಾರು ಹಾಗೂ ಮುಂಗಾರು ಮಳೆಯಲ್ಲಿ ಏರುಪೇರಾಗುತ್ತಿದೆ. ಅತಿಯಾದ ಉಷ್ಣತೆ ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ಅಂತರ್ಜಲ ಮಟ್ಟವು ಜಿಲ್ಲೆಯಲ್ಲಿ 600ರಿಂದ 700 ಅಡಿಗೆಳಿಗೆ ಕುಸಿಯಲಿದ್ದು, ಆತಂಕ ಸೃಷ್ಟಿಸಿದೆ. ಎಲ್ಲಾ ವಿಷಯಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು.
ಸಮಾವೇಶವನ್ನು ಉದ್ದೇಶಿಸಿ ರಾಜಸ್ತಾನದ ಐದು ನದಿಗಳನ್ನು ಮತ್ತೆ ಜೀವನದಿಗಳನ್ನಾಗಿಸುವಲ್ಲಿ ಕಾರ್ಯಕ್ರಮ ರೂಪಿಸಿದ ಜಲತಜ್ಞ ರಾಜೇಂದ್ರ ಸಿಂಗ್ ಹಾಗೂ ಇತರ ಜನಪರ ಕಾಳಜಿಯ ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ತಾಲೂಕು ಅಧ್ಯಕ್ಷ ಬಿ.ಪ್ರೇಮನಾಥ ಶೆಟ್ಟಿ, ಸುಳ್ಯ ತಾಲೂಕು ಅಧ್ಯಕ, ಲೋಲಾಕ್ಷ ಗೌಡ ಭೂತಕಲ್ಲು, ಜಿಲ್ಲಾ ಉಪಾಧ್ಯಕ್ಷ ಅಲ್ವಿನ್ ಮಿನೇಜಸ್, ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.







