ಮಂಗಳೂರು: ಜು.11ರಂದು ನೀರು ಪೂರೈಕೆಯಿಲ್ಲ !
ಅಡ್ಯಾರು-ಕಣ್ಣೂರು ಬಳಿ ಪೈಪ್‌ಲೈನ್ ದುರಸ್ತಿ
ಮಂಗಳೂರು, ಜು.10: ತುಂಬೆ ಕಿಂಡಿ ಅಣೆಕಟ್ಟಿನಿಂದ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ಪೈಪ್‌ಲೈನ್ ಅಡ್ಯಾರು- ಕಣ್ಣೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಸಮೀಪ ಒಡೆದು ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಜು. 11ರಂದು ಕೂಡಾ ನಗರದಲ್ಲಿ ನೀರು ಪೂರೈಕೆಯಾಗದು.
ತುಂಬೆಯಿಂದ ಪಡೀಲ್ ಪಂಪ್‌ಹೌಸ್‌ಗೆ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯಲ್ಲಿ ಅಡ್ಯಾರ್‌ನ ಮಾತಾ ನರ್ಸರಿಯ ಮುಂಭಾಗದಲ್ಲಿ ರವಿವಾರ ರಾತ್ರಿ ನೀರು ಸೋರಿಕೆಯಾಗಿತ್ತು. ಮುಖ್ಯ ಪೈಪ್‌ಲೈನ್ ಜಾಯಿಂಟ್‌ನಲ್ಲಿ ಬಿರುಕಿನಿಂದ ನೀರು ಸೋರಿಕೆಯಾಗುತ್ತಿದ್ದು, ಪೈಪ್‌ಲೈನ್ ಮೇಲಿನ ಮಣ್ಣು ತೆರವು ಗೊಳಿಸಿ ದುರಸ್ತಿ ಕಾರ್ಯ ಸೋಮವಾರ ಆರಂಭಗೊಂಡಿತ್ತು. ಆದರೆ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ನೀರು ತುಂಬುವ ಕಾರಣ ಪೈಪ್‌ಲೈನ್ ಜಾಯಿಂಟ್ ಸರಿಪಡಿಸಲು ವಿಳಂಬವಾಗಿದೆ.
ಈಗಾಗಲೇ ಸರ್ಫೇಸ್ ಏರ್‌ವಾಲ್ವ್ ಓಪನ್ ಮಾಡಿ ವೆಲ್ಡಿಂಗ್ ಕಾರ್ಯ ಆಗಿದೆ. ಬಳಿಕ ಏರ್‌ವಾಲ್ವ್ ಮುಚ್ಟಲಾಗುತ್ತಿದೆ. ನಾಳೆ ಸಂಜೆಯವರೆಗೂ ಕಾಮಗಾರಿ ಮುಂದುವರಿಯಲಿದೆ. ಸಂಜೆಯಿಂದ ಪಂಪಿಂಗ್ ನಡೆಯಲಿದೆ ಎಂದು ಮನಪಾ ಕಾರ್ಯನಿರ್ವಾಹಕ ಇಂಜಿನಿಯರ್ ಲಿಂಗೇಗೌಡ ಪತ್ರಿಕೆಗೆ ತಿಳಿಸಿದ್ದಾರೆ.
ಪಡೀಲ್‌ಗೆ ತುಂಬೆಯಿಂದ ನೀರು ಸರಬರಾಜು ಆಗುವ ಪ್ರಮಾಣದಲ್ಲಿ ರವಿವಾರ ರಾತ್ರಿ ವೇಳೆ ನೀರು ಕಡಿಮೆಯಾದ ಹಿನ್ನೆಲಯೆಲ್ಲಿ ಪೈಪ್‌ಲೈನ್ ಪರಿಶೀಲಿಸಿದಾಗ ಪೈಪ್‌ಲೈನ್‌ನ ಬಿರುಕು ಪಾಲಿಗೆ ಅಧಿಕಾರಿಗಳ ಗಮನಕ್ಕೆ ಬಂದಿತ್ತು.
ಸೋಮವಾರ ಜೆಸಿಬಿ ಸಹಾಯದಿಂದ ಪೈಪ್‌ಲೈನ್ ಮೇಲಿನ ಮಣ್ಣು ತೆರವು ಮಾಡಿ ಕಾಮಗಾರಿ ಆರಂಭಿಸಲಾಗಿತ್ತು. ಇದರಿಂದಾಗಿ ನಗರದ ಕೆಲವು ಕಡೆಗಳಲ್ಲಿ ಸೋಮವಾರದಿಂದ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಇದೀಗ ಇಂದು ನಗರದ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಜನತೆಯನ್ನು ಕಾಡುತ್ತಿದೆ.
ಕಳೆದ ಕೆಲ ವರ್ಷಗಳಿಂದ ಅಡ್ಯಾರು- ಕಣ್ಣೂರು ಬಳಿ ಈ ಪೈಪ್‌ಲೈನ್‌ನ ಸಮಸ್ಯೆ ಎದುರಾಗಿತ್ತಿದೆ. ಪ್ರತಿ ವರ್ಷ ದುರಸ್ತಿ ಮಾಡಲಾಗುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಮಾತ್ರ ಸಿಗುತ್ತಿಲ್ಲ.
ಈಗಾಗಲೇ ಮುಂಗಾರು ಮಳೆಯು ತಡವಾಗಿ ಆರಂಭವಾದ ಹಿನ್ನೆಲೆಯಲ್ಲಿ ಜೂನ್ ತಿಂಗಳಿನಾದ್ಯಂತ ನಗರದಲ್ಲಿ ನೀರಿನ ಕೊರತೆಯ ಆತಂಕ ಕಾಡಿತ್ತು. ರೇಶನಿಂಗ್ ವ್ಯವಸ್ಥೆಯ ಮೂಲಕ ನೀರು ಪೂರೈಕೆ ಮಾಡುತ್ತಿದ್ದರೂ ಹಲವು ಕಡೆಗಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಇನ್ನೇನು ಮಳೆಗಾಲ ಆರಂಭವಾಗಿ ತುಂಬೆಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ ಅನ್ನುವಷ್ಟರಲ್ಲಿ ಮತ್ತೆ ಜನತೆ ನೀರಿನ ಮಸ್ಯೆಯನ್ನು ಎದುರಿಸುವಂತಾಗಿದೆ.







