ಪುತ್ತೂರು ಅತ್ಯಾಚಾರ ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಮನವಿ

ಉಡುಪಿ, ಜು.10: ಪುತ್ತೂರಿನ ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಪಟ್ಟ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳಬೇಕೆಂದು ಉಡುಪಿಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಪರವಾಗಿ ಕಾರ್ಯಕರ್ತರಾದ ಡಾ.ಶಿವಾನಂದ ನಾಯಕ್ ಹಾಗೂ ಶ್ರೀಹರಿ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಅಪರಾಧಿ ಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಅಭಾವಿಪ ಆಗ್ರಹಿಸಿದೆ.
ಈ ಪ್ರಕರಣವನ್ನು ಮುಂದಿಟ್ಟುಕೊಂಡು ಕೆಲವು ಕಿಡಿಗೇಡಿಗಳು ಆರೋಪಿಗಳು ಎಬಿವಿಪಿ ಕಾರ್ಯಕರ್ತರೆಂದು ಅಪಪ್ರಚಾರ ಮಾಡುತ್ತಿದ್ದು, ಈ ಪ್ರಕರಣದ ಆರೋಪಿಗಳಿಗೂ ಅಭಾವಿಪಕ್ಕೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಸಂಘಟನೆಯ ಸದಸ್ಯರಾಗಿಲ್ಲ. ಆದರೂ ಸಹ ಆರೋಪಿಗಳ ಜೊತೆಗೆ ಸಂಘಟನೆಯ ಹೆಸರು ಸೇರಿಸಿ ಅಪಪ್ರಚಾರ ನಡೆಸುತ್ತಿರುವುದರಿಂದ ಸಂಘಟನೆಯ ಘನತೆಗೆ ಧಕ್ಕೆ ಬಂದಿದೆ. ಇಲಾಖೆ ಕೂಡಲೇ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಸಾಮಾಜಿಕ ಜಾಲತಾಮಗಳಲ್ಲಿ ಸುಳ್ಳುಸುದ್ದಿಗಲನ್ನು ಹರಿಯ ಬಿಡುವ ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.







