ವೈದ್ಯರ ಸುರಕ್ಷತೆಗೆ ಕೇಂದ್ರ ಕಾನೂನು: ಪರಿಶೀಲನೆಗೆ ಸಮಿತಿ ರಚನೆಗೆ
ಹೊಸದಿಲ್ಲಿ, ಜು.10: ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ಹಾಗೂ ವೈದ್ಯಕೀಯ ಸಂಸ್ಥಾಪನೆಗಳಲ್ಲಿ ಎಸಗುವ ಹಿಂಸಾಚಾರದ ವಿರುದ್ಧ ಶಾಸನವೊಂದನ್ನು ಜಾರಿಗೊಳಿಸುವಲ್ಲಿ ಇರುವ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯವು 10 ಮಂದಿ ಸದಸ್ಯರ ಸಮಿತಿಯೊಂದನ್ನು ರಚಿಸಿದೆ.
ಕಳೆದ ತಿಂಗಳು ಕೋಲ್ಕತಾದ ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ, ಭಾರತೀಯ ವೈದ್ಯಕೀಯ ಸಂಘ (ಐಎಂಎ) ರಾಷ್ಟ್ರವ್ಯಾಪಿಯಾಗಿ ಪ್ರತಿಭಟನೆ ನಡೆಸಿತ್ತು ಹಾಗೂ ಆಸ್ಪತ್ರೆಗಳಲ್ಲಿ ವೈದ್ಯಕೀಯ ವೃತ್ತಿಪರ ರ ಮೇಲೆ ಹಿಂಸಾಚಾರ ನಡೆಯುವುದನ್ನು ತಡೆಯಲು ಕಾನೂನೊಂದನ್ನು ಜಾರಿಗೊಳಿಸಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿತ್ತು.
ಜುಲೈ 5ರಂದು ರಚನೆಯಾದ ಸಮಿತಿಯು ಕರ್ತವ್ಯನಿರತ ವೈದ್ಯರು ಹಾಗೂ ಆಸ್ಪತ್ರೆಗಳ ಮೇಲೆ ನಡೆಯುವ ಆಕ್ರಮಣದ ವಿರುದ್ಧ ಕೇಂದ್ರ ಸರಕಾರವು ಶಾಸನವೊಂದನ್ನು ಜಾರಿಗೊಳಿಸುವಲ್ಲಿ ಇರುವ ಸಾಧಕ-ಬಾಧಕಗಳನ್ನು ಪರಿಶೀಲಿಸಲಿದೆ ಎಂದು ಸಚಿವರು ತಿಳಿಸಿದರು.
ಈ ಸಮಿತಿಯು ಗೃಹ ಸಚಿವಾಲಯ ಹಾಗೂ ಕಾನೂನು ವ್ಯವಹಾರಗಳ ಇಲಾಖೆಯ ಸದಸ್ಯರನ್ನೊಳಗೊಂಡಿದೆಯೆಂದು ಅವರು ಹೇಳಿದರು.
ಭಾರತೀಯ ವೈದ್ಯಕೀಯ ಮಂಡಳಿ ಹಾಗೂ ವೈದ್ಯರ ಸಂಘಟನೆಗಳು ಹಾಗೂ ಏಮ್ಸ್ ಮತ್ತು ಆರ್‌ಎಂಎಲ್ ಆಸ್ಪತ್ರೆಗಳ ವೈದ್ಯಕೀಯ ಅಧೀಕ್ಷಕರುಗಳ ಪ್ರತಿನಿಧಿಗಳನ್ನು ಕೂಡಾ ಸಮಿತಿಯು ಒಳಗೊಂಡಿದೆಯೆಂದು ಆರೋಗ್ಯ ಸಚಿವಾಲಯ ತಿಳಿಸಿದೆ.







