2 ವರ್ಷಗಳಾದರೂ ಬಾರದ ರಾಷ್ಟ್ರಪತಿ ಪುರಸ್ಕಾರ ಫಲಿತಾಂಶ: ವಿದ್ಯಾರ್ಥಿಯಿಂದ ಪ್ರಧಾನಿ ಕಚೇರಿಗೆ ದೂರು

ಸಾತ್ವಿಕ್ ಶರ್ಮ
ಪುತ್ತೂರು: ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನಲ್ಲಿ ರಾಷ್ಟ್ರಪತಿ ಪುರಸ್ಕಾರದ ಪರೀಕ್ಷೆಗೆ ಹಾಜರಾಗಿ 2 ವರ್ಷಗಳಾದರೂ ಫಲಿತಾಂಶ ಪ್ರಕಟವಾಗದಿರುವ ಬಗ್ಗೆ ಬೇಸತ್ತ ಪುತ್ತೂರಿನ ವಿದ್ಯಾರ್ಥಿಯೋರ್ವ ಇದೀಗ ಪ್ರಧಾನಿ ಕಾರ್ಯಾಲಯಕ್ಕೆ ನೇರವಾಗಿ ಪತ್ರ ಬರೆದಿದ್ದಾರೆ.
ಪುತ್ತೂರು ನಿವಾಸಿ ಇಲ್ಲಿನ ವಿವೇಕಾನಂದ ಕಾಲೇಜ್ನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಸಾತ್ವಿಕ್ ಶರ್ಮ ಬಿ.ಎಸ್ ಎಂಬವರು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದ ವಿದ್ಯಾರ್ಥಿ.
ಸಾತ್ವಿಕ್ ಶರ್ಮ 2017ರಲ್ಲಿ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಗೆ ಹಾಜರಾಗಿದ್ದರು. ಆ ಸಂದರ್ಭದಲ್ಲಿ ಅವರು ಪುತ್ತೀರನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದರು. ಈ ಹಿಂದೆ ಪ್ರಧಾನಿ ಕಾರ್ಯಾಲಯಕ್ಕೆ ಒಮ್ಮೆ ಅಪೀಲು ಸಲ್ಲಿಸಿದ್ದರು. ಬಳಿಕ ಆತನ ಮನವಿಯನ್ನು ಯುವ ವ್ಯವಹಾರಗಳ ಸಚಿವಾಲಯ ಹಾಗೂ ಮುಂದೆ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಗೆ ಹಸ್ತಾಂತರಿಸಲಾಗಿತ್ತು. ಆದರೂ ಫಲಿತಾಂಶ ಪ್ರಕಟವಾಗದಿರುವ ಹಿನ್ನಲೆಯಲ್ಲಿ ಇದೀಗ ಮತ್ತೊಮ್ಮೆ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಸಾತ್ವಿಕ್ ನೇರವಾಗಿ ಪ್ರಧಾನಿಯನ್ನೇ ಉದ್ದೇಶಿಸಿ ಬರೆದಿರುವ ಪತ್ರದಲ್ಲಿ ರಾಷ್ಟ್ರಪತಿ ಪದಕ ಪಡೆದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದಲ್ಲಿ ಮೀಸಲಾತಿ ಲಭಿಸುವುದರಿಂದ ಫಲಿತಾಂಶವನ್ನು ಆದಷ್ಟು ಬೇಗನೆ ಪ್ರಕಟಿಸುವ ಅಗತ್ಯವಿದೆ ಎಂದು ವಿನಂತಿಸಲಾಗಿದೆ.
''ನನ್ನ ಮಗ ಸಾತ್ಮಿಕ ಕಳೆದ 2 ವರ್ಷಗಳ ಹಿಂದೆ 10ನೇ ತರಗತಿಯಲ್ಲಿದ್ದಾಗ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನಲ್ಲಿ ರಾಷ್ಟ್ರಪತಿ ಪುರಸ್ಕಾರ್ ರಾಷ್ಟ್ರೀಯ ಪರೀಕ್ಷೆಗೆ ಹಾಜರಾಗಿದ್ದ. ಈ ಪರೀಕ್ಷೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ಅತ್ಯುನ್ನತ ಗ್ರೇಡ್ ಆಗಿದ್ದು, ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದೆ ಸಿಇಟಿ ಆಗಿ ಮೆಡಿಕಲ್ ಹಾಗೂ ಇಂಜಿಯರಿಂಗ್ ಓದುವಾಗ ರಿಸರ್ವೇಶನ್ ಇರುತ್ತದೆ. ಆದರೆ ಕಳೆದ 2017ರಲ್ಲಿ ನಡೆದ ಪರೀಕ್ಷೆಯ ರಿಸಲ್ಟ್ ಈ ವರೆಗೂ ಬಂದಿಲ್ಲ. ಈ ಬಗ್ಗೆ ಹಲವಾರು ಬಾರಿ ಮನವಿ, ಆರ್ಟಿಐ ಮೂಲಕ ಸಂಪರ್ಕಿಸಿದರೂ ಸ್ಕೌಟ್ಸ್ ಗೈಡ್ಸ್ ಹೆಡ್ ಆಫೀಸ್ ಏನೇನೋ ಸಬೂಬುಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದೆ. ಈ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ವಿಚಾರಿಸಿದರೆ 'ರಿಸಲ್ಟ್ ಈಸ್ ಆನ್ ಪ್ರೋಸೆಸ್' ಅಂತ ಬಂತು. ಈ ಎರಡೂ ಲೆಟರನ್ನು ರೆಫರ್ ಮಾಡಿ ಮತ್ತೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಉತ್ತರಕ್ಕಾಗಿ ಕಾಯುತ್ತಾ ಇದ್ದೇವೆ.
ನನ್ನ ಮಗ ಹಾಗೂ ಅವನ ಹಾಗಿರುವ ದೇಶದ ಲಕ್ಷಾಂತರ ಮಕ್ಕಳು ಈ ಪರೀಕ್ಷೆಗಾಗಿ ತುಂಬಾ ತಯಾರಿ ನಡೆಸಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಿರಿಸಿ ಪರೀಕ್ಷೆ ಬರೆದಿದ್ದಾರೆ. ಸುಮಾರು ಒಂದು ವಾರಗಲ ಕಾಲ ಕ್ಯಾಂಪ್ ಮಾಡಿ ಪರೀಕ್ಷೆ ಎದುರಿಸಿದ್ದಾರೆ. ದೇಶದ ಅತ್ಯುನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿಗಳ ಹೆಸರಿನಲಿ ನಡೆಸುವ ಈ ಪರೀಕ್ಷೆಯಲ್ಲಿ ಮಕ್ಕಳನ್ನು ವೃಥಾ ಕಾಯಿಸುವ ಮೂಲಕ ಅವರನ್ನು ಶೋಷಿಸುತ್ತಿದ್ದಾರೆ.
- ರಾಜೇಶ್ ಶರ್ಮ, ಸಾತ್ವಿಕ್ ಶರ್ಮ ಅವರ ತಂದೆ







