ಬಂದೂಕುಧಾರಿಗಳಿಂದ 18 ಮಂದಿಯ ಹತ್ಯೆ

ಸಿಡ್ನಿ, ಜು. 10: ಪಪುವ ನ್ಯೂಗಿನಿಯ ದುರ್ಗಮ ಗ್ರಾಮವೊಂದರಲ್ಲಿ ಬಂದೂಕುಧಾರಿಗಳು ಸೋಮವಾರ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 18 ಮಂದಿಯನ್ನು ಹತ್ಯೆಗೈದಿದ್ದಾರೆ.
ಬುಡಕಟ್ಟು ಜನಾಂಗಗಳ ನಡುವಿನ ವೈಷಮ್ಯ ಈ ದಾಳಿಗೆ ಕಾರಣ ಎಂದು ಭಾವಿಸಲಾಗಿದೆ ಹಾಗೂ ಹಂತಕರನ್ನು ಬೇಟೆಯಾಡುವುದಾಗಿ ಪ್ರಧಾನಿ ಜೇಮ್ಸ್ ಮರಾಪ್ ಬುಧವಾರ ಹೇಳಿದ್ದಾರೆ.
ಪೆಸಿಫಿಕ್ ಸಮುದ್ರದಲ್ಲಿರುವ ಬಡ, ಆದರೆ ಸಂಪನ್ಮೂಲ ಸಮೃದ್ಧ ದ್ವೀಪ ರಾಷ್ಟ್ರದಲ್ಲಿ ಹಿಂಸೆ ಹಿಂದಿನಿಂದಲೂ ತಾಂಡವವಾಡುತ್ತಿದೆ. ಆದರೆ, ಈ ರಕ್ತಪಾತದ ಪ್ರಮಾಣವು ದೇಶದಲ್ಲಿ ಆಘಾತವನ್ನು ಉಂಟು ಮಾಡಿದೆ.
ರಾಜಧಾನಿ ಪೋರ್ಟ್ ಮೋರ್ಸ್‌ಬೈಯಿಂದ ಸುಮಾರು 630 ಕಿ.ಮೀ. ದೂರದಲ್ಲಿರುವ ಕರಿಡ ಗ್ರಾಮದಲ್ಲಿ ನಡೆದ ಈ ದಾಳಿಗೆ ನಿಖರ ಕಾರಣ ಗೊತ್ತಾಗಿಲ್ಲ. ಆದರೆ, ಅಲ್ಲಿ ಹಲವು ವರ್ಷಗಳಿಂದ ವಿವಿಧ ಬುಡಕಟ್ಟು ಜನಾಂಗಗಳ ನಡುವೆ ಘರ್ಷಣೆ ನಡೆಯುತ್ತಿದೆ.
‘‘ಇದು ಹಿಂದೆ ನಡೆದ ದಾಳಿಯೊಂದಕ್ಕೆ ಪ್ರತೀಕಾರವಾಗಿದೆ. ಈ ದಾಳಿಯನ್ನು ದಿಢೀರನೆ ಮಾಡಲಾಗಿದೆ’’ ಎಂದು ಹೆಲ ಪ್ರಾಂತದ ಗವರ್ನರ್ ಫಿಲಿಪ್ ಉಂಡಿಯಲು ಹೇಳಿದ್ದಾರೆ.
Next Story





