ಖಶೋಗಿ ಹತ್ಯೆಯ ಬಗ್ಗೆ ಕ್ರಮ ತೆಗೆದುಕೊಳ್ಳಿ
ಅಮೆರಿಕಕ್ಕೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ತನಿಖಾಗಾರ್ತಿ ಒತ್ತಾಯ

ಲಂಡನ್, ಜು. 10: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಯ ಬಗ್ಗೆ ನಾನು ಸಿದ್ಧಪಡಿಸಿರುವ ವರದಿಯ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಣತೆ ಆ್ಯಗ್ನೆಸ್ ಕ್ಯಾಲಮಾರ್ಡ್ ಮಂಗಳವಾರ ಅಮೆರಿಕವನ್ನು ಒತ್ತಾಯಿಸಿದ್ದಾರೆ .ಟರ್ಕಿ ದೇಶದ ನಗರ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ‘ವಾಶಿಂಗ್ಟನ್ ಪೋಸ್ಟ್’ನ ಅಂಕಣಕಾರರೂ ಆಗಿರುವ ಖಶೋಗಿಯನ್ನು ಕಳೆದ ವರ್ಷದ ಅಕ್ಟೋಬರ್ 2ರಂದು ಹತ್ಯೆ ಮಾಡಲಾಗಿತ್ತು. ಅದು ಸೌದಿ ಅರೇಬಿಯವು ನಡೆಸಿದ ನ್ಯಾಯಾಂಗೇತರ ಹತ್ಯೆಯಾಗಿದೆ ಎಂಬುದಾಗಿ ಸ್ವತಂತ್ರ ತನಿಖೆ ನಡೆಸಿದ ಆ್ಯಗ್ನೆಸ್ ತನ್ನ ವರದಿಯಲ್ಲಿ ಹೇಳಿದ್ದಾರೆ.
ಈ ವಿಷಯದಲ್ಲಿ ಅಮೆರಿಕದ ವೌನವನ್ನೂ ಅವರು ಟೀಕಿಸಿದ್ದಾರೆ. ‘‘ಮೌನ ಒಂದು ಆಯ್ಕೆಯಲ್ಲ. ಧ್ವನಿ ಏರಿಸುವುದು ಅಗತ್ಯವಾಗಿದೆಯಾದರೂ ಅದು ಸಾಕಾಗುವುದಿಲ್ಲ. ನಾವು ಕಾರ್ಯಪ್ರವೃತ್ತರಾಗಬೇಕಾಗಿದೆ’’ ಎಂದು ಲಂಡನ್‌ನಲ್ಲಿ ಮಾನವಹಕ್ಕು ಗುಂಪುಗಳು ಏರ್ಪಡಿಸಿದ ಸಮ್ಮೇಳನವೊಂದರಲ್ಲಿ ಮಾತನಾಡಿದ ಆ್ಯಗ್ನೆಸ್ ಹೇಳಿದರು. ಖಶೋಗಿ ಹತ್ಯೆಯ ಬಗ್ಗೆ ಸೌದಿ ಅರೇಬಿಯಕ್ಕೆ ಮಾಹಿತಿಯಿತ್ತು ಹಾಗೂ ಹತ್ಯೆಗೆ ಅದು ಜವಾಬ್ದಾರಿಯಾಗಿದೆ ಎಂದು ತನ್ನ ವರದಿಯಲ್ಲಿ ಆ್ಯಗ್ನೆಸ್ ಹೇಳಿದ್ದಾರೆ.
ಹತ್ಯೆಗೆ ಸಂಬಂಧಿಸಿ ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರನ್ನು ವಿಚಾರಣೆಗೆ ಗುರಿಪಡಿಸಬೇಕು ಎಂಬುದಾಗಿಯೂ ತನಿಖಾ ವರದಿ ಹೇಳಿದೆ.







