ಶಾಲೆ ಆರಂಭವಾಗಿ ಒಂದೂವರೆ ತಿಂಗಳಾದರೂ ಸಿಗದ ಪಠ್ಯಪುಸ್ತಕ, ಸಮವಸ್ತ್ರ

ಬೆಂಗಳೂರು, ಜು.11: ಬಿಬಿಎಂಪಿ ವ್ಯಾಪ್ತಿಯಲ್ಲಿನ ಸರಕಾರಿ ಶಾಲೆಗಳು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ, ಇದುವರೆಗೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಬ್ಯಾಗ್ ತಲುಪದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಪಾಲಿಕೆ ವತಿಯಿಂದ ಬಿಬಿಎಂಪಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ಎಲ್ಲವನ್ನೂ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ 91 ಅಂಗನವಾಡಿಗಳು, 15 ಪ್ರಾಥಮಿಕ ಶಾಲೆಗಳು, 32 ಪ್ರೌಢಶಾಲೆಗಳು, 15 ಪದವಿ ಪೂರ್ವ ಕಾಲೇಜುಗಳು ಮತ್ತು ನಾಲ್ಕು ಪದವಿ ಕಾಲೇಜುಗಳಿದ್ದು, ಈ ಸಾಲಿಗೆ ಒಟ್ಟು 15,807 ವಿದ್ಯಾರ್ಥಿಗಳಿಗೆ ಇದುವರೆಗೂ ಯಾವುದೇ ಪರಿಕರಗಳು ಲಭ್ಯವಾಗಿಲ್ಲ ಎಂದು ಆಕ್ರೋಶ ಕೇಳಿಬರುತ್ತಿದೆ.
ಬಿಬಿಎಂಪಿಯ ಪ್ರಸಕ್ತ ಆಯವ್ಯಯದಲ್ಲಿ ಒಂದು ಕೋಟಿ ರೂ. ಶಾಲೆಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಮತ್ತಿತರೆ ಸಾಮಗ್ರಿಗಳಿಗಾಗಿ ಮೀಸಲಿಡಲಾಗಿತ್ತು. ಆದರೆ, ಅತೀ ಮುಖ್ಯವಾದ ಪಠ್ಯಪುಸ್ತಕಗಳೂ ಸಿಗದಿದ್ದರಿಂದ ಶಾಲೆಗಳಲ್ಲಿ ಬೋಧನೆಗೆ ಸಾಕಷ್ಟು ಅಡಚಣೆ ಉಂಟಾಗುತ್ತಿದೆ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕಾರಣವೇನು?:
ಹಿಂದಿನ ವರ್ಷದ ಬಿಲ್ ಮೊತ್ತ ಬಿಡುಗಡೆ ಹಾಗೂ ಪ್ರಸಕ್ತ ಸಾಲಿನ ಕಾರ್ಯಾದೇಶ ತಡವಾದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಲೋಕಸಭೆ ಚುನಾವಣೆ ನೀತಿಸಂಹಿತೆ ಜಾರಿಯಾದ್ದರಿಂದ ಗುತ್ತಿಗೆ ಪಡೆದ ಕಂಪನಿಗಳು ಶಾಲೆಗಳಿಗೆ ಇಂದಿಗೂ ಪರಿಕರಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಇನ್ನೊಂದು ಕಡೆ ಬಿಬಿಎಂಪಿ ಶಾಲಾ ಮಕ್ಕಳಿಗೆ ಪರಿಕರ ವಿತರಿಸಲು ಟೆಂಡರ್ ಪಡೆದಿದ್ದ ವಿವಿಧ ಕಂಪನಿಗಳು ಕಳೆದ ವರ್ಷದ ಪೂರೈಕೆಯ ಬಿಲ್ ರಸೀದಿ ಸಲ್ಲಿಕೆ ಹಾಗೂ ಅನುಮೋದನೆ ತಡವಾದ್ದರಿಂದ ಹಣ ಬಿಡುಗಡೆಯೂ ವಿಳಂಬವಾಗಿತ್ತು. ಶಿಕ್ಷಣಕ್ಕೆ ಬೇಕಾದ ಪರಿಕರಗಳು ವಿಳಂಬವಾದ ಬಗ್ಗೆ ಪಾಲಿಕೆ ಅಧಿಕಾರಿಗಳು ಮುಂದಿನ ವಾರ ವಿತರಣೆ ಮಾಡಿಬಿಡುತ್ತೇವೆಂಬ ಸಬೂಬು ನೀಡಲಾಗುತ್ತದೆ. ಆದರೆ, ಅದನ್ನು ಜಾರಿಗೆ ತರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಶಿಕ್ಷಕರು ಹೇಳಿದ್ದಾರೆ.
ಫೆಬ್ರವರಿ ತಿಂಗಳಲ್ಲಿಯೇ ಕಮಿಟಿಗೆ ಕಾರ್ಯಾದೇಶ ಅನುಮೋದನೆಗೆ ನೀಡಿದ್ದೆವು. ಆದರೆ, ಆ ವೇಳೆ ಚುನಾವಣಾ ನೀತಿ ಸಂಹಿತೆ ಬಂದು ಅನುಮೋದನೆ ತಡವಾಯ್ತು. ಇನ್ನು ಗುತ್ತಿಗೆ ಪಡೆದ ಕಂಪನಿಗಳಿಗೆ ಕಾರ್ಯಾದೇಶ ಕೊಟ್ಟ ನಂತರ 45 ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಬಿಬಿಎಂಪಿ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.







